ಚುನಾವಣೆ: ಶೇ.84 ಮತದಾನ
ಚಿಕ್ಕಮಗಳೂರು: ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.84.13 ರಷ್ಟು ಮತದಾನ ನಡೆದಿದೆ.
ಜಿಲ್ಲೆಯಲ್ಲಿ ಒಟ್ಟು 7498 ಮತದಾರರು ಇದ್ದು, ಈ ಪೈಕಿ 6308 ಮಂದಿ ಮತದಾನ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ ಇಲ್ಲಿನ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.
ರಾಜ್ಯ ಒಕ್ಕಲಿಗರ ಸಂಘದ ಜಿಲ್ಲೆಯ ಒಂದು ನಿರ್ದೇಶಕರ ಸ್ಥಾನಕ್ಕೆ ಹಳಸೆ ಶಿವಣ್ಣ, ಎ. ಪೂರ್ಣೇಶ್, ಬ್ಯಾರವಳ್ಳಿ ನಾಗರಾಜ್, ಡಾ. ಕೆ.ಪಿ. ಅಂಶುಮಂತ್, ಗಂಧದ ಎಂ.ಡಿ. ಕೃಷ್ಣೇಗೌಡ, ಬಿ.ಎಸ್. ಸುಬ್ರಹ್ಮಣ್ಯಗೌಡ ಅವರು ಸ್ಪರ್ಧೆ ಮಾಡಿದ್ದಾರೆ.
ಜಿಲ್ಲೆಯಲ್ಲಿ 7498 ಮತದಾರರು ಇದ್ದು, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್. ಪುರ ತಾಲೂಕುಗಳ ಮತದಾರರಿಗೆ ಮತದಾನ ಮಾಡಲು ನಗರದ ಜೆವಿಎಸ್ ಶಾಲೆಯಲ್ಲಿ ಹಾಗೂ ಮೂಡಿಗೆರೆಯ ವಿ.ಎಸ್. ಶಾಲೆಯಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು.
ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಯತ್ತ ಬರುತ್ತಿರುವುದು ಕಂಡು ಬಂದಿತು.
ಸ್ಪರ್ಧಿಗಳು ಕೊನೆ ಕ್ಷಣದವರೆಗೆ ಮತಯಾಚನೆಯಲ್ಲಿ ತೊಡಗಿದ್ದರು. ಜೆವಿಎಸ್ ಶಾಲೆಯಲ್ಲಿ ಶಾಸಕ ಸಿ.ಟಿ. ರವಿ ಅವರು ಮತದಾನ ಮಾಡಿದರು.