ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ
ಕ.ಪ್ರ.ವಾರ್ತೆ, ಕಡೂರು, ಡಿ.5
ತಾಲೂಕಿಗೆ 120 ಮೆ.ವ್ಯಾ. ವಿದ್ಯುತ್ಗೆ ಬದಲಾಗಿ ಕೇವಲ 50 ಮೆ.ವ್ಯಾ. ಸರಬರಾಜಾಗುವ ಮೂಲಕ ವಿದ್ಯುತ್ ಕೊರತೆ ಉಂಟಾಗಿದೆ.
ಬೇಸಿಗೆ ಸಮೀಪಿಸುತ್ತಿರುವುದರಿಂದ ಅಧಿಕಾರಿಗಳು ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆ ಎದುರಾಗಬಾರದು. ಈ ನಿಟ್ಟಿನಲ್ಲಿ ತಮ್ಮ ಯೋಜನೆಗಳೊಂದಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ ವೈ.ಎಸ್.ವಿ. ದತ್ತ ಸೂಚಿಸಿದರು.
ಇಲ್ಲಿನ ಸೀಗೇಹಡ್ಲು ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದ ಅವರು, ಬದಲಾವಣೆ ತರುವ ನಿಟ್ಟಿನಲ್ಲಿ ಜನಸಾಮಾನ್ಯರ ಪರವಾಗಿ ನಾನು ಕ್ಷೇತ್ರದ ಕೆಲಸ ಮಾಡಲು ಇಚ್ಛಿಸಿದ್ದು ಇಲಾಖೆಗಳ ಅಧಿಕಾರಿಗಳು ಇಲಾಖೆಯಲ್ಲಿರುವ ಕೊರತೆ ಬಗ್ಗೆ ತಮಗೆ ಸರಿಯಾದ ಮಾಹಿತಿ ನೀಡಿದಲ್ಲಿ ತಾವು ಸರ್ಕಾರದಿಂದ ಅಗತ್ಯವಿರುವ ಸವಲತ್ತು ತರುವ ಭರವಸೆ ನೀಡಿದರು.
ಟಿ.ಸಿ. ಮಾಹಿತಿ ನೀಡಿ: ತಾಲೂಕಿನಲ್ಲಿ ಅಕ್ರಮ ಮತ್ತು ಸಕ್ರಮ ಪಂಪ್ಸೆಟ್ಗಳ ಬಳಕೆ ಹೆಚ್ಚಾಗಿ ಟಿ.ಸಿ.ಗಳು ಸುಟ್ಟು ಹೋಗುತ್ತಿರುವುದರಿಂದ ಟಿ.ಸಿ.ಗಳ ಕೊರತೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಾಲೂಕಿಗೆ 120 ಮೆ.ವ್ಯಾ. ವಿದ್ಯುತ್ ಅವಶ್ಯಕತೆ ಇದೆ. ಕೇವಲ 50 ಮೆ.ವ್ಯಾ. ಮಾತ್ರ ಸರಬರಾಜಾಗುತ್ತಿದ್ದು, ಇದರಿಂದ ಟಿ.ಸಿ.ಗಳು ಸುಟ್ಟು ಹೋಗಲು ಕಾರಣವಾಗಿದೆ. ಮೆಸ್ಕಾಂ ಅಧಿಕಾರಿಗಳು ಟಿ.ಸಿ.ಗಳ ಬೇಡಿಕೆ ಬಗ್ಗೆ ಮಾಹಿತಿ ನೀಡಿದಲ್ಲಿ ತಾವು ಸರ್ಕಾರದಿಂದ ತರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಆದ್ಯತೆ ಮೇಲೆ ಕಾಮಗಾರಿ: ಕ್ಷೇತ್ರದ ಪ.ಜಾ. ಮತ್ತು ಪ.ಪ. ವರ್ಗದ ವಿವಿಧ ಕಾಮಗಾರಿಗಳಿಗೆ 1.15 ಕೋಟಿ ಬಿಡುಗಡೆಯಾಗಿದೆ. ಅದನ್ನು ಆಯಾ ಸಮುದಾಯದ ಮುಖಂಡರೇ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿ ಮಾಡಿ ಅನುದಾನ ಹಂಚುವ ವ್ಯವಸ್ಥೆ ಮಾಡಲಾಗಿದೆ.
ಶಾಸಕರು ಮಾತ್ರ ಹಂಚಬೇಕೆಂಬ ನಿಯಮ ಕೈಗೊಂಡಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲೂ ನಿಜವಾದ ಫಲಾನುಭವಿಗಳಿಗೆ ಸವಲತ್ತು ಸಿಗುವಂತೆ ಪಟ್ಟಿ ಸಿದ್ಧಪಡಿಸಲು ತಿಳಿಸಲಾಗಿದೆ. 1 ಕೋಟಿ ಶಾಸಕರ ನಿಧಿಗೆ ನೀಡಲಾಗಿದೆ. ಆದ್ಯತೆ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕೊಳವೆಬಾವಿ ಕೊರೆಸಿ: 2 ಲಕ್ಷ ಸೀಗೇಹಡ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು. ಕುಡಿಯುವ ನೀರಿಗೆ ಜಿ.ಪಂ.ಗೆ ಕೇಂದ್ರ ಸರ್ಕಾರದಿಂದ ಶೇ.50, ರಾಜ್ಯ ಸರ್ಕಾರದಿಂದ ಶೇ.50ರಷ್ಟು ಅನುದಾನ ಬರುವುದರಿಂದ ತಂಗಲಿ ಗ್ರಾಮದ ರೀತಿ ವಿವಾಧ ಆಗದಂತೆ ತಾವು ಹೇಳಿದ ರೀತಿಯಲ್ಲಿ ಕಾನೂನಾತ್ಮಕವಾಗಿ ಕುಡಿಯುವ ನೀರಿನ ಕಾಮಗಾರಿ ಮಾಡಿ ಟ್ಯಾಂಕರ್ಗಳ ಮೂಲಕ ನೀರಿನ ಪೂರೈಕೆ ಆಗುತ್ತಿರುವ ಕಡೆ ಹೊಸ ಕೊಳವೆಬಾವಿ ಕೊರೆಯಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಅಧಿಕಾರಿಗೆ ಸೂಚಿಸಿದರು.
ಮುಖಂಡ ಗಂಗಾಧರನಾಯ್ಕ ಮಾಸಾಶನ ಮಂಜೂರಾತಿಗೆ 2 ತಿಂಗಳಾಗಿ ವಿಳಂಬವಾಗುತ್ತಿರುವ ದೂರಿನ ಬಗ್ಗೆ ತಹಸೀಲ್ದಾರರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು. ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಂ. ಮಹೇಶ್ವರಪ್ಪ ಸೀಗೇಹಡ್ಲು ಗ್ರಾಮದ ಹಾಲಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 1.50 ಲಕ್ಷ ಸಹಾಯಧನ ನೀಡಲಾಗುವುದು. 2 ತಿಂಗಳ ಹಾಲಿನ ಬಾಕಿ ಹಣ ರೈತರಿಗೆ ಕೊಡಿಸಲಾಗುವುದು.
ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ದತ್ತ ಅವರು, ಹೇಳಿದಾಗ ತಹಸೀಲ್ದಾರ್ ತಿಮ್ಮಾಭೋವಿ ನೀರಿನ ಅಭಾವ ಹೆಚ್ಚಾಗಿರುವ ಕಡೆ ಖಾಸಗಿ ಭೂಮಿಯ ಕೊಳವೆಬಾವಿಯಲ್ಲಿ ನೀರಿದ್ದರೂ ಕೂಡ ಸರ್ಕಾರ ವಶಪಡಿಸಿಕೊಂಡು ಜನರಿಗೆ ನೀರು ಕೊಡುತ್ತದೆ. ಇದಕೆ ಅಡ್ಡಿಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಉಳಿದಂತೆ ವಿವಿಧ ಇಲಾಖೆಗಳ ಯೋಜನೆಗಳು ಮತ್ತು ಮಾಹಿತಿಗಳನ್ನು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.
ಇದೇ ಸಂದರ್ಭ ಗ್ರಾಮದ ಪರವಾಗಿ ಶಾಸಕ ದತ್ತರವರನ್ನು ಜೆಡಿಎಸ್ನ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಸೀಗೇಹಡ್ಲು ಹರೀಶ್ ಮತ್ತು ಗ್ರಾಮಸ್ಥರು ಸನ್ಮಾನಿಸಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಶೋಭಾ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಜೆಡಿಎಸ್ ಮುಖಂಡ ಸೀಗೇಹಡ್ಲು ಹರೀಶ್, ತಾ.ಪಂ. ಸದಸ್ಯ ಪ್ರಭುಕುಮಾರ್, ಸಂಕ್ಲಾಪುರ ಕುಮಾರ್, ಬಿಸಲೆರೆ ಕೆಂಪರಾಜು, ಈಶ್ವರಪ್ಪ, ಹಾಲಸಿದ್ದಪ್ಪ, ಗ್ರಾಪಂ ಅಧ್ಯಕ್ಷರು ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.