ನೀರು ಯೋಜನಾ ವರದಿ ಕೇಂದ್ರಕ್ಕೆ ಸಲ್ಲಿಕೆ
ಗುಂಡ್ಲುಪೇಟೆ: ಪಟ್ಟಣಕ್ಕೆ ಸಮರ್ಪಕ ಕಬಿನಿ ನೀರು ತರುವ ಉದ್ದೇಶಿತ ಮೂಲ ಸ್ಥಾವರ ನಂಜನಗೂಡು ತಾಲೂಕಿನ ದೇಬೂರಿನಿಂದ ಗುಂಡ್ಲುಪೇಟೆಗೆ ಕಬಿನಿ ತ್ವರಿತ ನೀರು ಕೊಳಾಯಿ ಮಾರ್ಗದ ಸಮಗ್ರ ಯೋಜನಾ ವರದಿಯನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಪುರಸಭೆ ಕಬಿನಿ ತ್ವರಿತ ನೀರು ಕೊಳಾಯಿ ಮಾರ್ಗದ ಸರ್ವೆಗೆ 10 ಲಕ್ಷ ರು ಬಿಡುಗಡೆ ಮಾಡಿದ್ದು, ನಂಜನಗೂಡು ತಾಲೂಕಿನ ದೇಬೂರಿನಿಂದ ಗುಂಡ್ಲುಪೇಟೆಯ 48 ಕಿ.ಮೀ. ಕೊಳಾಯಿ ಮಾರ್ಗದ ಸರ್ವೆಯನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿ ಮುಗಿಸಿದೆ.
ದೇಬೂರಿನಿಂದ ಗುಂಡ್ಲುಪೇಟೆಯವರೆಗೆ ಡಿಪಿಆರ್ ಮುಗಿದಿದೆ. ದೇಬೂರಿನ ನೀರೆತ್ತುವ ಘಟಕದ ಬಳಿ 1 ಎಕರೆ ಜಮೀನು ಖರೀದಿಸಬೇಕಿದೆ. ಪಂಪ್ಹೌಸ್ ನವೀಕರಣ ಜೊತೆಗೆ ಗುಂಡ್ಲುಪೇಟೆಯ ಹೊರ ವಲಯದ ಶ್ರೀರಾಮ ಗುಡ್ಡದ ಬಳಿಯು 1 ಎಕರೆ ಪ್ರದೇಶದಲ್ಲಿ ಟ್ಯಾಂಕ್ ನಿರ್ಮಿಸುವ ಬಗ್ಗೆ ಸಮಗ್ರ ವರದಿ ತಯಾರಾಗಿದೆ. ಒಟ್ಟಾರೆ ಈ ಯೋಜನೆಯ ಮತ್ತ ಸುಮಾರು 86 ಕೋಟಿ ರು. ವೆಚ್ಚ ತಗುಲಲಿದ್ದು, ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ನಗರಗಳ ಸೌಲಭ್ಯ ಯೋಜನೆಯಡಿ ಹಣ ಬಿಡುಗಡೆ ಮಾಡುವಂತೆ ಡಿಪಿಆರ್ ವರದಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಅಧಿಕಾರಿಗಳು ಜ.6 ಸೋಮವಾರ ರಂದು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ನಗರಗಳ ಸೌಲಭ್ಯ ಯೋಜನೆಯಡಿ ನಂಜನಗೂಡು ತಾಲೂಕಿನ ದೇಬೂರಿನಿಂದ ಗುಂಡ್ಲುಪೇಟೆಗೆ ಕಬಿನಿ ತ್ವರಿತ ನೀರು ಕೊಳಾಯಿ ಮಾರ್ಗ ಕಾಮಗಾರಿಗೆ ಹಣ ಬಿಡುಗಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಮುಖ್ಯಮಂತ್ರಿ ಮೂಲಕ ಒತ್ತಡ ತಂದಿದ್ದಾರೆ.
ಇಂತಹ ಯೋಜನೆ ಇಡೀ ಜಿಲ್ಲೆಯ ಯಾವ ಪುರಸಭೆ ಅಥವಾ ನಗರ ಸಭೆಗಳು ಯೋಜನೆ ರೂಪಿಸಿಲ್ಲ. ಆದರೆ ಸಹಕಾರ ಸಚಿವ ಮಹದೇವಪ್ರಸಾದ್ ಆದೇಶದಂತೆ ಇಲ್ಲಿನ ಪುರಸಭೆ ಅಧಿಕಾರಿ ಟಿ.ಎನ್.ನರಸಿಂಹಮೂರ್ತಿ ವರದಿ ಕಳುಹಿಸಿದ್ದಾರೆ. 2001 ರಲ್ಲಿ ಕಬಿನಿ ನೀರು ಪಟ್ಟಣಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಾಸಕ ಎಚ್.ಎಸ್.ಮಹದೇವಪ್ರಸಾದ್ ಭಗೀರಥ ಪ್ರಯತ್ನ ನಡೆಸಿ ಕಬಿನಿ ನೀರು ತಂದಿದ್ದರು.
12 ವರ್ಷದಷ್ಟು ಹಳೆಯ ಪೈಪ್ಲೈನ್ ಆಗಿರುವ ಕಾರಣ ಪೈಪ್ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ತಾಲೂಕಿನ 8 ಗ್ರಾಪಂಗಳ ಒಟ್ಟು 28 ಗ್ರಾಮಗಳಿಗೆ ಕಬಿನಿ ನೀರು ಹರಿಯಲಿರುವ ಕಾರಣ ಗುಂಡ್ಲುಪೇಟೆಗೆ ಸಾಕಷ್ಟು ನೀರು ಸಿಗುತ್ತಿಲ್ಲ. 28 ಗ್ರಾಮಗಳಿಗೆ ಕಬಿನಿ ನೀರು ಬೆಳಗಿನ ವೇಳೆ ಹರಿಸಿಕೊಳ್ಳಲಿರುವ ಕಾರಣ ಗುಂಡ್ಲುಪೇಟೆಗೆ ಸಂಜೆ ವೇಳೆಗೆ ಕಬಿನಿ ನೀರು ತಲುಪಿದರೂ ಕೆಲ ಬಡಾವಣೆಗೆ ಮಾತ್ರ ನೀರು ದೊರೆಯುತ್ತಿದೆ.
ಈ ಎಲ್ಲಾ ಕಾರಣಗಳಿಂದ ಗುಂಡ್ಲುಪೇಟೆ ಜನತೆಗೆ ಕಬಿನಿ ನೀರು ಸಿಗದಿರುವುದನ್ನು ಮನಗಂಡು ಸಚಿವ ಮಹದೇವಪ್ರಸಾದ್ ನೀರು ಕೊಳಾಯಿ ಮಾರ್ಗದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಈ ಯೋಜನೆ ಕಾರ್ಯಗತವಾದರೆ ಪಟ್ಟಣದ ಜನತೆಗೆ ಕಬಿನಿ ನೀರು ಪ್ರತ್ಯೇಕವಾಗಿ ಕಬಿನಿ ಒದಗಲಿದೆ. ಈಗಿರುವ ಹಳೆಯ ಪೈಪ್ಲೈನ್ನಲ್ಲಿ 28 ಗ್ರಾಮಗಳಿಗೆ ಕಬಿನಿ ನೀರು ಪೂರೈಕೆಯಾಗಲಿದೆ.