ಎಲ್‌ಪಿಜಿ ಗ್ಯಾಸ್ ದರ ಇಳಿಸಿ
ಚಿಕ್ಕಮಗಳೂರು: ಎಲ್‌ಪಿಜಿ ಗ್ಯಾಸ್ ದರ ಇಳಿಸುವಂತೆ ಆಗ್ರಹಿಸಿ ನಗರದ ಆಟೋ ಚಾಲಕರು ಮತ್ತು ಮಾಲೀಕರು ಸೋಮವಾರ ಆಟೋ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಗ್ಯಾಸ್ ದರ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆಗೆ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರು ಬೆಂಬಲ ಸೂಚಿಸಿದ್ದರ ಹಿನ್ನೆಲೆಯಲ್ಲಿ ಯಾವುದೇ ಆಟೋ ರಸ್ತೆಗೆ ಇಳಿಯಲಿಲ್ಲ.
ಆಟೋಗಳನ್ನು ಅವಲಂಬಿತ ನಗರದ ಹೊರವಲಯದ ಜನರಿಗೆ ಸ್ವಲ್ಪಮಟ್ಟಿಗೆ ತೊಂದರೆಯಾಯಿತು. ಬಸ್ ನಿಲ್ದಾಣದಿಂದ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದ ಜನರಿಗೆ ಆಟೋ ಬಂದ್ ಮುಷ್ಕರ ಬಿಸಿ ತಟ್ಟಿತು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ನಗರ ಆಟೋ ಚಾಲಕರು ಮತ್ತು ಮಾಲೀಕರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಆಟೋ ಗ್ಯಾಸ್ ದರವನ್ನು ಸುಮಾರು 5 ರಿಂದ 6 ಬಾರಿ ಹೆಚ್ಚಿಸಿದ್ದು, ಈಗ ಪುನಃ ದರವನ್ನು 12 ರಿಂದ 13 ಹೆಚ್ಚಳ ಮಾಡಿದ್ದರಿಂದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ತುಂಬಾ ತೊಂದರೆಯಾಗಿದೆ. ಆಟೋಗಳ ಖರ್ಚು ವೆಚ್ಚ ಹೆಚ್ಚಾಗಿರುವುದರಿಂದ ಆಟೋಗಳ ಕನಿಷ್ಠ ದರ ಹೆಚ್ಚಳ ಮಾಡಬೇಕೆಂದು ನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿತು.
ಭಗತ್ ಸಿಂಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಆಟೋ ಗ್ಯಾಸ್ ದರ ಹೆಚ್ಚಳ ಖಂಡಿಸಿದ್ದು, ಈಗಾಗಲೇ ಆಟೋ ಬಿಡಿ ಭಾಗಗಳ ಬೆಲೆಯನ್ನು ಕಂಪನಿಗಳು ಮನಸೋಇಚ್ಛೆ ಏರಿಕೆ ಮಾಡುತ್ತಿದ್ದು, ಆಟೋ ಚಾಲಕರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಸಂಘವು ತಿಳಿಸಿದೆ.
ನಗರದಲ್ಲಿ ಈಗಾಗಲೇ ಆಟೋಗಳ ಸಂಖ್ಯೆ ಹೆಚ್ಚಳವಾಗಿದೆ. ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಆಟೋಗಳಿಗೆ ಪರವಾನಗಿ ನೀಡಬೇಕು. ಸಾಕಷ್ಟು ಆಟೋ ಚಾಲಕರಿಗೆ ನಿವೇಶನ, ಮನೆಗಳಿಲ್ಲ ಹಾಗೂ ಪಡಿತರ ಚೀಟಿಗಳಿಲ್ಲ. ಸರ್ಕಾರ ಕೂಡಲೇ ಇಂಥವರನ್ನು ಗುರುತಿಸಿ ನಿವೇಶನ, ಮನೆ, ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್. ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಜಿ. ವಿನಯ್, ಉಪಾಧ್ಯಕ್ಷ ಸಿ. ಬಸವರಾಜ್, ಭಗತ್ ಸಿಂಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಐ.ಎಂ. ಪೂರ್ಣೇಶ್, ಕಾರ್ಯದರ್ಶಿ ರುದ್ರೇಶ್ ಹಾಗೂ ನಗರದ ಆಟೋ ಚಾಲಕರು ಮತ್ತು ಮಾಲೀಕರು ಪಾಲ್ಗೊಂಡಿದ್ದರು.