ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಾಡು ನುಡಿ ರಕ್ಷಣೆಗೆ ಕೈಜೋಡಿಸಿ

Lingaraj Badiger
Updated On : 7 Jan 2014, 11:29 am

ಚಿಕ್ಕಮಗಳೂರು: ಕನ್ನಡಕ್ಕೆ ತೊಂದರೆ, ಅಡ್ಡಿ ಎದುರಾಗುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ನಿಲ್ಲಬೇಕು ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಕರೆ ನೀಡಿದ್ದಾರೆ.
ಸೋಮವಾರ ಸಾಗರದಿಂದ ಮಡಿಕೇರಿ ಸಮ್ಮೇಳನಕ್ಕೆ ತೆರಳುವ ಮಾರ್ಗದ ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೇವಾಲಯ ಮತ್ತು ಗ್ರಾಮದ ಪರವಾಗಿ ನೀಡಿದ ಹೃದಯಸ್ಪರ್ಶಿ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗೆ ಸಂಕಷ್ಟ ಎದುರಾಗುವ ಸಂದರ್ಭದಲ್ಲಿ ಈ ಎಲ್ಲವನ್ನು ಪರಿಹರಿಸಲು ಎಲ್ಲಾ ಕನ್ನಡಿಗರು ಕೈಜೋಡಿಸಬೇಕು ಎಂದು ಹೇಳಿದರು.
ಅನುಷ್ಠಾನವಾಗಲಿ: ತಾಯಿ ನೆಲದ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೀತಿಯಿಂದ ಅಪ್ಪಿಕೊಳ್ಳಬೇಕು. ತಾಯಿ ನೆಲದ ಋಣ ತೀರಿಸುವ ಕೆಲಸ ಎಲ್ಲರಿಂದ ನಡೆಯಬೇಕು ಎಂದ ಅವರು, ಸಮ್ಮೇಳನದ ಆಶಯಗಳು ಅನುಷ್ಠಾನಗೊಳಿಸುವ ಕೆಲಸ ನಡೆಯಬೇಕು ಎಂದು ತಿಳಿಸಿದರು.
30 ವರ್ಷದ ಹಿಂದೆ ಈ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಣ್ಣನ್ ಬರಮಾಡಿಕೊಂಡು ಗೌರವ ಸಲ್ಲಿಸಿದ್ದರು. ಈಗ ಸಮ್ಮೇಳನದ ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲೂ ಕಣ್ಣನ್ ಮತ್ತು ತಂಡದವರು ಬರಮಾಡಿಕೊಂಡು ಅಭಿನಂದಿಸಿ ಕೋದಂಡರಾಮನ ದರ್ಶನ ಮತ್ತು ಕನ್ನಡ ಪೂಜೆ ದರ್ಶನ ಮಾಡಿಸಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.
ತರಳಬಾಳು ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ನಾದದೊಂದಿಗೆ ನಾ. ಡಿಸೋಜ ಮತ್ತು ದಂಪತಿಯನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಸ್. ಗಿರಿಧರ ಯತೀಶ್, ವೈ.ಕೆ. ರಂಗಪ್ಪ, ತಾಲೂಕು ಕಾರ್ಯದರ್ಶಿ ಶ್ರೀದೇವಿ ಮೋಹನ್ ಮಾಲಾರ್ಪಣೆಯೊಂದಿಗೆ ಅಭಿನಂದಿಸಿದರೆ, ಗ್ರಾಮ ಮತ್ತು ದೇವಾಲಯ ಪರವಾಗಿ ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಶಲ್ಯ ಹೊದಿಸಿ ಗೌರವಿಸಿದರು. ಕಣ್ಣನ್ ಅವರು ಮೈಸೂರು ಪೇಟ ತೋಡಿಸಿ, ಕೈಗೆ ಬೆಳ್ಳಿ ಗದೆ ನೀಡಿ ಕನ್ನಡ ಮಂತ್ರ ಪಠಿಸುವ ಮೂಲಕ ಹೃದಯಸ್ಪರ್ಶಿಯವಾಗಿ ಅಭಿನಂದಿಸಿದರು.
ದೇವಾಲಯದಲ್ಲಿ ಪೂಜಾ ಕಾರ್ಯದರ್ಶಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ನಡೆದ ಕನ್ನಡ ಪೂಜೆಗೆ ನಾ. ಡಿಸೋಜ ಮತ್ತು ದಂಪತಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸಾದದೊಂದಿಗೆ ಅವರನ್ನು ಗೌರವಿಸಲಾಯಿತು. ಅಲ್ಲಿಂದ ಅವರು ಬೇಲೂರು ಮಾರ್ಗವಾಗಿ ಮಡಿಕೇರಿಗೆ ತೆರಳಿದರು. ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಸಾಗರ ತಾಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement