ಬಾರದ ಆಶ್ರಯ ಮನೆ ಅನುದಾನ: ಆರೋಪ
ಬಾಳೆಹೊನ್ನೂರು: ಸಮೀಪದ ಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ಯೋಜನೆಯಡಿ ಫಲಾನುಭವಿಗಳು ನಿರ್ಮಿಸಿದ ಮನೆಗಳಿಗೆ ಕಳೆದ ಎರಡು ವರ್ಷದಿಂದ ಹಣ ಬಿಡುಗಡೆಯಾಗಿಲ್ಲವೆಂದು ಫಲಾನುಭವಿಗಳು ದೂರಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಿರುವ ಈ ಗ್ರಾಮಗಳಲ್ಲಿ ಪಂಚಾಯಿತಿಗೆ ಹೋದರೆ ಸ್ಪಷ್ಟ ಮಾಹಿತಿಯನ್ನು ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ನೀಡುತ್ತಿಲ್ಲ. ಕಾರ್ಯದರ್ಶಿ, ಪಿಡಿಒ ವಾರದಲ್ಲಿ ಮೂರು ದಿನ ಮಾತ್ರ ಕಚೇರಿಗೆ ಬಂದು ಹೋಗುತ್ತಾರೆ. ಕಳೆದ ಎರಡು ವರ್ಷಗಳಿಂದ ಕಚೇರಿಗೆ ಅಲೆದು ಅಲೆದು ಸಾಕಾಗಿದೆ.
ಅಡಿಪಾಯ ನಿರ್ಮಿಸಿ ಜಿಪಿಎಸ್ ಮಾಡಿಸಿಕೊಡಲಾಗಿದ್ದು, ಫಲಾನುಭವಿಗಳು ಸಾಲ ಪಡೆದು ಕಾಮಗಾರಿ ನಡೆಸಿದ್ದಾರೆ. ಸಾಲ ನೀಡಿದವರು ಬಂದು ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದು, ಕೂಲಿ ಕೆಲಸವನ್ನೇ ನಂಬಿ ಬದುಕಿದ ನಾವು ಸಾಲ ತೀರಿಸಲಾಗದೆ ಪರದಾಡುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ವಿವಿಧ ಸಚಿವರಿಗೆ ಮತ್ತು ಜಿಲ್ಲಾಧಿಕಾರಿ, ಜಿಪಂ ಮುಖ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಫಲಾನುಭವಿಗಳು ಒತ್ತಾಯಿಸಿದ್ದಾರೆ.