ರಸ್ತೆ ದುರಸ್ತಿ ಕಾರ್ಯಕ್ಕೆ ಅಡ್ಡಿ: ಆರೋಪ
ಮೂಡಿಗೆರೆ: ಕಳಸ ಹೋಬಳಿ ಬಸ್ರಿಕಲ್ನಿಂದ ಕುದುರೆಮುಖ ಮಾರ್ಗವಾಗಿ ಎಸ್.ಕೆ.ಬಾರ್ಡರ್ವರೆಗಿನ ರಸ್ತೆ ಡಾಂಬರೀಕರಣ, ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವ ಕುದುರೆಮುಖ ವನ್ಯಜೀವಿ ವಿಭಾಗದ ವಿರುದ್ಧ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಅರಣ್ಯ ಸಚಿವ ವೀರಪ್ಪ ಮೊಯ್ಲಿ, ರಾಜ್ಯ ಅರಣ್ಯ ಸಚಿವ ರಮನಾಥ ರೈ ಈ ರಸ್ತೆ ಬಗ್ಗೆ ಗಮನ ಹರಿಸದಿರುವುದು ಖಂಡನಾರ್ಹ. ಈ ಭಾಗದಲ್ಲಿ ನಡೆಯುವ ಜನಪರ ಕೆಲಸಗಳಿಗೆ ಅರಣ್ಯ ಇಲಾಖೆ ಯಾವುದೇ ರೀತಿಯ ಅಡಚಣೆ ಮಾಡ ಕೂಡದು. ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಜನ ಸಹನೆ ಕಳೆದುಕೊಳ್ಳಬೇಕಾಗುತ್ತದೆ ಎಂದವರು ಹೇಳಿದರು.
ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ ಮಾತನಾಡಿ, ಕೊಟ್ಟಿಗೆಹಾರದಿಂದ ಮಾಗುಂಡಿ ಮಾರ್ಗವಾಗಿ ಎಸ್.ಕೆ. ಬಾರ್ಡರ್ವರೆಗೆ ರಸ್ತೆ ಡಾಂಬರೀಕರಣ ಹಾಗೂ ದುರಸ್ತಿಗಾಗಿ ರು. 24 ಕೋಟಿ ಮಂಜೂರಾಗಿತ್ತು. ಇದರಂತೆ ಕೊಟ್ಟಿಗೆಹಾರದಿಂದ ಕಾಮಗಾರಿಯೂ ಪ್ರಾರಂಭವಾಗಿತ್ತು. ಆದರೆ ಕಳೆದ ಕೆಲದಿನಗಳಿಂದ ಕುದುರೆಮುಖ ಮಾರ್ಗದಲ್ಲಿ ರಸ್ತೆ ಡಾಂಬರೀಕರಣಕ್ಕೆ ಮುಂದಾದಾಗ ಅರಣ್ಯ ಇಲಾಖೆ ತಡೆ ಹಿಡಿದಿದೆ. ಇದರಿಂದ ರಸ್ತೆ ಡಾಂಬರೀಕರಣ ಹಾಗೂ ದುರಸ್ತಿ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ ಎಂದವರು ಹೇಳಿದರು.
7 ವರ್ಷ ನೆನೆಗುದಿಗೆ: ಕಳಸದ ಪಟ್ಟಣಕ್ಕೆ ಕುಡಿಯುವ ನೀರಿಗೆ ಮಂಜೂರಾದ ರು. 7 ಕೋಟಿ ವೆಚ್ಚದ ಕಾಮಾಗಾರಿ ಅರಣ್ಯ ಇಲಾಖೆ ತಕರಾರಿನಿಂದ 7 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಇಲಾಖೆ ಇಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಕೊಡಬಾರದು ಎಂದರು.
ಕುದುರೆಮುಖ ರಸ್ತೆಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಲಾಯಿತು. ಈ ಸಂಬಂಧ ಡಿಎಫ್ಒ ದೂರವಾಣಿ ಮುಖಾಂತರ ಸಂಪರ್ಕಿಸಿ 2 ದಿನದಲ್ಲಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಒಪ್ಪಿದ ಪ್ರತಿಭಟನಕಾರರು 2 ದಿನದಲ್ಲಿ ರಸ್ತೆ ಡಾಂಮಾರಿಕರಣ ಹಾಗೂ ದುರಸ್ಥಿಗೆ ಅನುಮತಿ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುದುರೆಮುಖ ವಲಯ ಅರಣ್ಯಾಧಿಕಾರಿ, ಗ್ರಾಪಂ ಅಧ್ಯಕ್ಷೆ ಉಷಾ, ಹೋಬಳಿ ಅಧ್ಯಕ್ಷ ನಾಗೇಶ್ ಭಟ್, ಜಿಪಂ ಸದಸ್ಯೆ ಕವಿತಾ ಚಂದ್ರು, ರಂಗನಾಥ್, ಜಯಂತ್, ಶ್ರೇಯಂಶ, ರಮೇಶ್, ವಿಜಯ, ಮಹೇಶ್, ಜಗದೀಶ್, ವಿಶ್ವನಾಥ್ ಗೌಡ, ಪ್ರದೀಪ್, ನಾಗೇಶ್ ಗೌಡ ಮೊದಲಾದವರು ಇದ್ದರು.