ಕರಗಡ ಏತ ಕಾಮಗಾರಿಗೆ ಚುರುಕು ನೀಡಿ: ಗುರುಶಾಂತಪ್ಪ ಆಗ್ರಹ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.6
ಕರಗಡ ಏತ ನೀರಾವರಿ ಕಾಮಗಾರಿ ತ್ವರಿತವಾಗಿ ಮುಗಿಸಿ ಬೆಳವಾಡಿ, ದೇವನೂರು ಗ್ರಾಮದ ರೈತರ ನೀರಿನ ಬವಣೆ ನೀಗಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಆಗ್ರಹಿಸಿದ್ದಾರೆ.
ದೇವನೂರಿನ ಲಕ್ಷ್ಮೀಶ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಇದೊಂದು ರಾಜಕೀಯೇತರ ಹೋರಾಟವಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಕುಡಿಯುವ ನೀರಿನ ಈ ಯೋಜನೆ ಅನುಷ್ಠಾನಕ್ಕೆ ಹೋರಾಡಬೇಕು ಎಂದರು.
ಕುಂಟುತ್ತಾ ಸಾಗಿದ ಯೋಜನೆ: 30 ವರ್ಷಗಳ ಹಿಂದೆ ಯೋಜನೇತರ ಶೀರ್ಷಿಕೆಯಲ್ಲಿ ಆರಂಭವಾದ ಈ ಯೋಜನೆ ಇಂದಿಗೂ ಕುಂಟುತ್ತಾ ಬರುತ್ತಿದೆ. ಮುಗುಳವಳ್ಳಿ ಪಿಕ್ಅಪ್ ನಿಂದ ದೇವಿಕೆರೆ ಮೂಲಕ ಬೆಳವಾಡಿ, ದೇವನೂರು ಕೆರೆಗಳಿಗೆ ನೀರಿ ಹಾಯಿಸುವ ಯೋಜನೆ ಜಾರಿಗೊಂಡರೆ ಈ ಭಾಗದ ರೈತರ ಬದುಕು ಹಸನವಾಗುತ್ತದೆ ಎಂದು ಹೇಳಿದರು.
ಇದು ಕಾರ್ಯಗತಗೊಳಿಸಲು ಇನ್ನೂ ರು. 12 ಕೋಟಿ ಬಿಡುಗಡೆ ಆಗಬೇಕಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಇದನ್ನು ಕಾರ್ಯಗತಗೊಳಿಸಬೇಕಿದೆ. ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ, ನೀರಿಲ್ಲದೆ, ಈ ಭಾಗದಲ್ಲಿ ಬೆಳೆ ಬೆಂದು ಬೆಂಗಾಡು ಆಗುತ್ತಿದೆ ಎಂದು ಜನದನಿ ಸಂಚಾಲಕ ಬಿ. ಅಮ್ಜದ್ ಹೇಳಿದರು.
ಜನದನಿ ಸಂಚಾಲಕ ರವೀಶ್ ಕ್ಯಾತನಬೀಡು ಮಾತನಾಡಿ, ನಮ್ಮ ಜನಪ್ರತಿನಿಧಿಗಳಿಗೆ 30 ವರ್ಷದಲ್ಲಿ ರು. 4 ಕೋಟಿ ತರಲಾಗಲಿಲ್ಲ. ಯಾರ ಪಕ್ಷದವಾವರೇನೂ, ನಿಮಗೆ ವೋಟು ಬೇಕಾದರೆ ಯೋಜನೆಗೆ ದುಡ್ಡು ಬಿಡುಗಡೆ ಮಾಡಿಸಿಕೊಂಡು ಬನ್ನಿ ಎಂದರು. ಎಸ್.ಎಂ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ರೈತ ಮುಂಖಡ ಎಚ್.ಕೆ. ಶಶಿಧರ್, ಗಂಗಾಧರ್ ಹಾಗೂ ರೈತರು ಉಪಸ್ಥಿತರಿದ್ದರು.
ಕರಗಡ ಏತಾ ನೀರಾವರಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಆಗ್ರಹಿಸಿ ಜ. 25 ರಂದು ದೇವನೂರಿನಿಂದ ಚಿಕ್ಕಮಗಳೂರುವರೆಗೆ ಬೈಕ್ ಜಾಥಾ ನಡೆಸಲು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.