'ಕಳಪೆ ರಸಗೊಬ್ಬರ ವಿತರಣೆ; ಕ್ರಿಮಿನಲ್ ಪ್ರಕರಣ ದಾಖಲಿಸಿ'
ಚಿಕ್ಕಮಗಳೂರು: ನಕಲಿ, ಕಳಪೆ ರಸಗೊಬ್ಬರ ತಯಾರಕರ ಮತ್ತು ವಿತರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವು ರಸಗೊಬ್ಬರಗಳ ಮಾರಾಟ ಮಾಡಲು ಅವಕಾಶ ಇಲ್ಲದಿದ್ದರೂ ಮೂಡಿಗೆರೆ ತಾಲೂಕಿನಲ್ಲಿ ಖಾಸಗಿ, ಸರ್ಕಾರದ ಸಹಕಾರ ಸಂಸ್ಥೆಗಳಲ್ಲಿ ವ್ಯವಸ್ಥಿತವಾಗಿ ಮಾರಾಟ ನಡೆಯುತ್ತಿದೆ. 3 ವರ್ಷಗಳಿಂದ ನಕಲಿ, ಕಲಬೆರಕೆ ರಸಗೊಬ್ಬರಗಳಿಂದ ಬೆಳೆಗಳ ಮೇಲೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ರಸಗೊಬ್ಬರಗಳ ಪೋಷಾಕಾಂಶಗಳ ಕೊರತೆಯಿಂದಾಗಿ ಹೂ-ಕಾಯಿಗಳು ತಡೆದುಕೊಳ್ಳುವ ಸಾಮರ್ಥ್ಯ ಇಲ್ಲದೆ ಕಾಫಿ, ಅಡಿಕೆ, ಮೆಣಸು ಇತರೆ ಬೆಳೆಗಳ ಎಲೆ-ಕಾಯಿಗಳು ಉದುರಿವೆ. ಬೀಜಗಳ ಬೆಳವಣಿಗೆಯಿಲ್ಲದೆ ಜೊಳ್ಳು ಬಿದ್ದಿವೆ. ರೋಗಗಳ ಹಾವಳಿಗೆ ಒಣಗುತ್ತಿರುವ ಗಿಡಗಳು ಇಳುವರಿ ಕುಂಠಿತಗೊಂಡು ತೋಟಗಳು ಸರ್ವನಾಶದ ಅಂಚಿನಲ್ಲಿದ್ದು, ರಸಗೊಬ್ಬರಗಳಿಂದ ಬೆಳೆಗಳ ಮೇಲೆ ಆಗಿರುವ ಹಾನಿ ಕುರಿತು ಮೌಲ್ಯಮಾಪನ ಮಾಡುವುದರಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂದರ್ಭ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಸಿ. ದಯಾಕರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹಾಜರಿದ್ದರು.