ಪಪಂ ಅಕ್ರಮ ತನಿಖೆಯಾಗಲಿ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಜ.7
ಪಟ್ಟಣ ಪಂಚಾಯ್ತಿಗೆ 2 ನೇ ಹಂತದ ನಗರೋತ್ಥಾನ ಯೋಜನೆಗೆ ಮಂಜೂರಾದ 5 ಕೋಟಿ ರುಪಾಯಿ ಅನುದಾನದ ರಸ್ತೆ ಕಾಮಗಾರಿಯಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 2 ನೇ ಹಂತದ ನಗರೋತ್ಥಾನ ಯೋಜನೆಗೆ ಮಂಜೂರಾದ 5 ಕೋಟಿ ರುಪಾಯಿಯಲ್ಲಿ 4 ಕೋಟಿ ರುಪಾಯಿ ಕಾಂಕ್ರೀಟ್ ರಸ್ತೆ ಹಾಗೂ 1 ಕೋಟಿ ರುಪಾಯಿಯಲ್ಲಿ ಒಳ ಚರಂಡಿ ನಿರ್ಮಾಣಕ್ಕೆ ಮೀಸಲಾಗಿತ್ತು. ಹಿಂದಿನ ಪಟ್ಟಣ ಪಂಚಾಯ್ತಿಯ ಸದಸ್ಯರು ರಸ್ತೆಗಳನ್ನು ಗುರುತಿಸಿ ಸಭೆಯಲ್ಲಿ ಅನುಮೋದನೆ ನೀಡಿದ್ದರು ಎಂದರು.
ಅಧಿಕಾರಿಗಳ ದರ್ಬಾರ್: ಪಟ್ಟಣ ಪಂಚಾಯ್ತಿಗೆ ಹೊಸದಾಗಿ ಸದಸ್ಯರು ಆಯ್ಕೆಯಾಗಿದ್ದರೂ ಅಧ್ಯಕ್ಷರು ಆಯ್ಕೆ ಆಗದೆ ಇರುವುದರಿಂದ ಆಡಳಿತಾಧಿಕಾರಿಗಳೇ 2 ನೇ ಹಂತದ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗಳನ್ನು ಪ್ರಾರಂಭಿಸಿದ್ದಾರೆ. ಈ ಕಾಮಗಾರಿಗಳಲ್ಲಿ ಮುಖ್ಯವಾಗಿ ಕೆಲವು ರಸ್ತೆಗಳಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಆರೋಪಿಸಿದರು.
ಮುಖ್ಯವಾಗಿ ಹಳೇ ಮಂಡಗದ್ದೆ ಸರ್ಕಲ್ನಿಂದ ಅಡ್ಡ ರಸ್ತೆಗೆ ಎಂ.ಎಲ್.ಸಿ. ಶ್ರೀನಿವಾಸ್ ಅವರ ಅನುದಾನದಲ್ಲಿ ಈಗಾಗಲೇ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದರೂ ಅದನ್ನು ಮತ್ತೆ ಸೇರಿಸಲಾಗಿದೆ. ಕಾಳಿಂಕಾಬ ದೇವಸ್ಥಾನದ ಸಮೀಪ ರಸ್ತೆಯೇ ಇಲ್ಲದಿದ್ದರೂ ಅಂದಾಜು 60 ಮೀಟರ್ ರಸ್ತೆ ಸೇರಿಸಲಾಗಿದೆ. ಇನ್ನೂ ಹಲವಾರು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಪಟ್ಟಣ ಪಂಚಾಯ್ತಿಯ ಇಬ್ಬರು ಜೆಡಿಎಸ್ ಸದಸ್ಯರು, ಕಾಂಗ್ರೆಸ್ ಸದಸ್ಯರು ಈ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರಿಂದ ಸದ್ಯಕ್ಕೆ ರಸ್ತೆ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
15 ದಿನ ಗಡುವು:: ರಸ್ತೆ ಕಾಮಗಾರಿ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಅಮಾನತ್ತು ಮಾಡಬೇಕು. ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಮಾನಸ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಇನ್ನು 15 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯ್ತಿ ಎದುರು ಜೆಡಿಎಸ್ ಧರಣಿ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಪಟ್ಟಣ ಪಂಚಾಯ್ತಿಯ ಜೆಡಿಎಸ್ ಸದಸ್ಯರಾದ ಅಬ್ದುಲ್ ಸಾಬಾನ್, ಸುನೀಲ್ ಉಪಸ್ಥಿತರಿದ್ದರು.