ಮಾರ್ಚ್ನಲ್ಲಿ ದೊಡ್ಡಕೆರೆ ದುರಸ್ತಿ ಪೂರ್ಣ
ಚಿಕ್ಕಮಗಳೂರು: ಸುಮಾರು ರು. 3.45 ಕೋಟಿ ವೆಚ್ಚದಲ್ಲಿ ಹಿರೇಮಗಳೂರು ದೊಡ್ಡಕೆರೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮುಂಬರುವ ಮಾರ್ಚ್ನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಸೋಮವಾರ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಳೆದ ವರ್ಷ ಕೆರೆ ಏರಿ ಕುಸಿದಿತ್ತು. ಅದರ ದುರಸ್ತಿ ಭರದಿಂದ ಸಾಗಿದೆ. ರಿವಿಟ್ಮೆಂಟ್ ಮರು ನಿರ್ಮಾಣ, ಹೊಳೆತ್ತುವುದು. ಬಾಕ್ಸ್ ಡ್ರೈನೇಜ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಕನ್ನೇನಹಳ್ಳಿ ಬಳಿ ಕೆರೆಯ ಭಾಗದ ಮೆಟ್ಟಿಲುಗಳ ನಿರ್ಮಾಣ ಕಾರ್ಯ ಮುಗಿದಿದೆ ಹಿರೇಮಗಳೂರು ಭಾಗದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗಲು ಮೆಟ್ಟಿಲುಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಸಾಮರ್ಥ್ಯ ಹೆಚ್ಚಳ: ನಗರಕ್ಕೆ ಕುಡಿಯುವ ನೀರೊದಗಿಸುವ ಹಿರೇಕೊಳಲೆ ಕೆರೆಯ ಬಂಡನ್ನು ಮೇಲಕ್ಕೆತ್ತಿ ನೀರು ಸಂಗ್ರಹಣ ಸಾಮಥ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ. ಕೆರೆಯಲ್ಲಿರುವ ನೀರು ಖಾಲಿ ಆದ ನಂತರವೇ ಈ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ ಎಂದರು.
ನಗರದ 19 ವಾರ್ಡ್ಗಳಿಗೆ ಹಿರೇಕೊಳಲೆ ಕೆರೆ ನೀರನ್ನು ಪೂರೈಸಲಾಗುತ್ತಿದೆ. ಅದರ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಿದಲ್ಲಿ ಇನ್ನೂ ಹೆಚ್ಚಿನ ವಾರ್ಡ್ಗಳಿಗೆ ನೀರು ಕೊಡಬಹುದು ಎಂದು ತಿಳಿಸಿದರು.
ಜಿಲ್ಲಾಡಳಿತ ಈ ಕಾಮಗಾರಿಗೆ ಅನುಮತಿ ನೀಡಿದಲ್ಲಿ 3 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳುತ್ತದೆ. ಹಿಂದೆ ಜಿಲ್ಲೆಯ ವಿವಿಧ ಕಾಮಗಾರಿ ಮುಂದಿಟ್ಟುಕೊಂಡು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಈ ಕಾಮಗಾರಿಯನ್ನೂ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು ಎಂದವರು ಹೇಳಿದರು.
ವಿಶೇಷ ಅನುದಾನ: ಹಿಂದಿನ ಬಿಜೆಪಿ ಸರ್ಕಾರ ಇದಕ್ಕಾಗಿ ರು. 2.85 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿ ಟೆಂಡರ್ ಮುಗಿದು ರು. 30 ಲಕ್ಷದ ಕಾಮಗಾರಿ ಮುಗಿದಿದೆ. ಕೆರೆ ಒತ್ತುವರಿಯನ್ನು ತೆರವು ಮಾಡಲು ಅಲ್ಲಿನ ಜನರಿಂದ ಒಪ್ಪಿಗೆಯೂ ಸಿಕ್ಕಿದೆ ಎಂದು ಹೇಳಿದರು.
ಬೀಕನಹಳ್ಳಿ ಕೆರೆಯ ಫೀಡರ್ ಚಾನಲ್ ಕಾಮಗಾರಿಗೆ ರು. 80 ಲಕ್ಷ ಅನುದಾನವಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆ ಕಟಾವು ಮುಗಿದ ನಂತರ ಅಭಿವೃದ್ಧಿ ಕಾರ್ಯ ಆರಂಭಗೊಳ್ಳಲಿದೆ ಎಂದರು.
ನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ 12 ಕೊಳಚೆ ಪ್ರದೇಶಗಳನ್ನು ಗುರುತಿಸಿದೆ. ಅಲ್ಲಿನ ನಿವಾಸಿಗಳಿಗಳಿಗೆ ಜಿ ಪ್ಲಸ್ 3 ಮಾದರಿಯಲ್ಲಿ ಮನೆ ನಿರ್ಮಿಸಿಕೊಡಲು ಉದ್ದೇಶಿಸಿದೆ. ತಲಾ ಒಂದು ಮನೆಗೆ ರು. 5 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಸಮಗ್ರ ಯೋಜನಾ ವರದಿ ತಯಾರಿಸುವ ಕೆಲಸ ನಡೆಯುತ್ತಿದೆ. ಮನೆ ನಿರ್ಮಾಣಕ್ಕೆ ಸರ್ಕಾರಿ ಜಾಗದ ಲಭ್ಯತೆ ಇರಬೇಕು. ಖಾಸಗಿ ಜಾಗ ಇದ್ದಲ್ಲಿ ಜಿ ಪ್ಲಸ್ 3 ಮಾದರಿ ಮನೆ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದರು.
ನಗರದ ಶಾಂತಿ ನಗರ, ಲೇಂಡಿ ತಲಾಬ್, ಶ್ರೀಲೇಖಾ ಚಿತ್ರಮಂದಿರದ ಮುಂಭಾಗ, ತಮಿಳು ಕಾಲೋನಿ, ಗೌರಿ ಕಾಲುವೆ, ಕೌಂತೇಯ ಹೋಟೆಲ್ ಮುಂಭಾಗ, ಹಿರೇಮಗಳೂರು, ಪೆನ್ಷನ್ ಮೊಹಲ್ಲಾ, ದಂಟರಮಕ್ಕಿ, ಪಾಲಿಟೆಕ್ನಿಕ್ ಹಿಂಭಾಗ, ಸಣ್ಣ ನೀರಾವರಿ ಇಲಾಖೆಯ ಕಾಲುವೆ ಆಸುಪಾಸು ಸೇರಿ ಒಟ್ಟು ನಗರದಲ್ಲಿ 2,556 ಮಂದಿ ಕೊಳಚೆ ಪ್ರದೇಶದ ನಿವಾಸಿಗಳನ್ನು ಗುರುತಿಸಲಾಗಿದೆ ಎಂದರು.
ತಾಪಂ ಉಪಾಧ್ಯಕ್ಷ ಪುಟ್ಟೇಗೌಡ, ಸದಸ್ಯ ಕನಕರಾಜ್ ಅರಸ್, ನಗರಸಭೆ ಸದಸ್ಯ ಎಚ್.ಡಿ. ತಮ್ಮಯ್ಯ, ರವೀಂದ್ರ ಪ್ರಭು, ಜಿಪಂ ಸದಸ್ಯ ನಿರಂಜನ್, ಬಿಜೆಪಿ ಮುಖಂಡ ಕೋಟೆ ರಂಗನಾಥ್ ಹಾಗೂ ಸಣ್ಣ ನೀರಾವರಿ ಇಲಾಖೆ ಆಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.