ನಿರಾಶ್ರಿತರಿಗೆ ಪುನರ್ವಸತಿ: ಇಂದು ಮಹತ್ವದ ಸಭೆ
ಚಿಕ್ಕಮಗಳೂರು: ಕಳಸೇಶ್ವರ ದೇವಾಲಯಕ್ಕೆ ಸೇರಿರುವ ಒತ್ತುವರಿ ಇನಾಂ ಜಮೀನು ತೆರವುಗೊಳಿಸುವಂತೆ ಹೈಕೋರ್ಟ್ ಹೇಳಿದ್ದರಿಂದ ಇಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಚರ್ಚಿಸಲು ಗುರುವಾರ ಸಂಜೆ 4 ಗಂಟೆಗೆ ಹಿರಿಯ ಅಧಿಕಾರಿಗಳ ಸಭೆಯನ್ನು ಉಚ್ಚ ನ್ಯಾಯಾಲಯದ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಕರೆಯಲಾಗಿದೆ.
ಇಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ 220 ಕೋಟಿ ಅಂದಾಜು ಕ್ರಿಯಾಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ಕುರಿತು ಚರ್ಚಿಸಲು ಗುರುವಾರ ಸಭೆ ಕರೆಯಲಾಗಿದೆ.
ಹೈಕೋರ್ಟ್ ಆದೇಶ ಪಾಲನೆ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರಕ್ಕೆ ಪರ್ಯಾಯ ಮಾರ್ಗ ಇಲ್ಲದೆ ಹೋಗಿದ್ದರಿಂದ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿದೆ.
ಕಳಸೇಶ್ವರ ದೇವಾಲಯಕ್ಕೆ ಸೇರಿದ 14 ಸಾವಿರ ಎಕರೆ ಇನಾಂ ಭೂಮಿಯನ್ನು 2012ರ ಡಿಸೆಂಬರ್ 31ರೊಳಗೆ ತೆರವುಗೊಳಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತ್ತು. ಆದರೆ, ತಕ್ಷಣಕ್ಕೆ ಕ್ರಮ ಮುಂದಾದರೆ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿತ್ತು.
ಈ ಆದೇಶವನ್ನು ಪುನರ್ ಪರಿಶೀಲನೆ ನಡೆಸುವಂತೆ ಸುಬ್ರಹ್ಮಣ್ಯ ಮತ್ತಿತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮಂಗಳವಾರ ವಿಚಾರಣೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಪೀಠ ಸರ್ಕಾರದ ವಾದ ತಳ್ಳಿ ಹಾಕಿ, ಇಲ್ಲಿನ ಜನರನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಗುರುವಾರ ಸಭೆ ಕರೆಯಲಾಗಿದೆ.
ಮೀಸಲು ಅರಣ್ಯ: ಕಳಸೇಶ್ವರ ದೇವಾಲಯಕ್ಕೆ ಸೇರಿರುವ 14,340 ಎಕರೆ ಭೂಮಿಯಲ್ಲಿ 7436-13 ಎಕರೆ ಮೀಸಲು ಅರಣ್ಯದ ವ್ಯಾಪ್ತಿಗೆ ಒಳಪಡಲಿದ್ದು, ಇದರಲ್ಲಿ 204-19 ಎಕರೆ ಭೂಮಿಯನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಈ ಕುರಿತು ಕಂದಾಯ ಇಲಾಖೆಯ ಕಾರ್ಯದರ್ಶಿಗಳು 2001ರ ಜನವರಿ 24 ರಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಕಳಸೇಶ್ವರ ಇನಾಂ ಭೂಮಿಯಲ್ಲಿ 636 ಕುಟುಂಬಗಳಿದ್ದು, 3008 ಜನಸಂಖ್ಯೆ ಇದೆ. ಇಲ್ಲಿ ದೇವಾಲಯ, ಮಸೀದಿ, ಅಂಗನವಾಡಿ ಕೇಂದ್ರಗಳು, ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಖಾಸಗಿ ಅನಾಥಾಶ್ರಮ, ಇಲಾಖಾ ವಸತಿ ಗೃಹಗಳು ಹಾಗೂ ಮನೆಗಳಿವೆ.
ನ್ಯಾಯಾಲಯದ ಆದೇಶದ ಪ್ರಕಾರ ಇಲ್ಲಿನ ಎಲ್ಲಾ 636 ಕುಟುಂಬ ತೆರವುಗೊಳಿಸಿದರೆ, ತುಂಬಾ ತೊಂದರೆಯಾಗಲಿದೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ.
ಬಚಾವ್: ತಾವು ವಾಸವಾಗಿರುವ ಪ್ರದೇಶದಿಂದ ಏಕಾಏಕಿ ತೆರವುಗೊಳಿಸಿದರೆ ಜೀವನಕ್ಕೆ ತುಂಬಾ ತೊಂದರೆಯಾಗಲಿದೆ. ಅದುದರಿಂದ ಒತ್ತುವರಿ ತೆರವುಗೊಳಿಸುವಂತೆ ನೀಡಿರುವ ಆದೇಶವನ್ನು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದಿನ ಆದೇಶಕ್ಕೆ ಈ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಿತ್ತು.
ಮಂಗಳವಾರ ಇನಾಂ ಭೂಮಿಯ ವಿಚಾರಣೆ ಹೈಕೋರ್ಟ್ ಮುಂದೆ ಬಂದಾಗ, ಈಗಾಗಲೇ ತಡೆಯಾಜ್ಞೆ ನೀಡಿರುವ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದವರನ್ನು ತೆರವುಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಅದುದರಿಂದ ನ್ಯಾಯಾಲಯ ಮುಂದೆ ಹೋಗಿ ತಡೆಯಾಜ್ಞೆ ಪಡೆದಿರುವವರು ತಾತ್ಕಾಲಿಕವಾಗಿ ಬಚಾವ್ ಆಗಿದ್ದಾರೆ.