ವಿದ್ಯಾರ್ಥಿಗಳು ಸೌಲತ್ತು ಸದ್ಬಳಕೆ ಮಾಡಿಕೊಳ್ಳಲಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ. 9
ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.
ನಗರದ ವಿಶ್ವವಿದ್ಯಾಲಯ ವಿದ್ಯಾಸಂಸ್ಥೆಯಲ್ಲಿ ನಿರ್ಮಿಸಲಿರುವ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ರು.ಗಳನ್ನು ಪ್ರತಿವರ್ಷ ಖರ್ಚು ಮಾಡುತ್ತಿವೆ. ಊಟ, ವಸತಿ ಸಮವಸ್ತ್ರ ಸೈಕಲ್ ವಿತರಣೆ ಸೇರಿದಂತೆ ಆನೇಕ ಸವಲತ್ತು ನೀಡುತ್ತಿವೆ ಎಂದರು.
ಚಿಂತನೆ: ಕ್ಷೀರಭಾಗ್ಯ ಯೋಜನೆಯಡಿ ಇದೀಗ ವಾರಕ್ಕೆರಡು ದಿನ ಮಕ್ಕಳಿಗೆ ನೀಡಲಾಗುತ್ತಿರುವ ಹಾಲನ್ನು ಮುಂದಿನ ದಿನಗಳಲ್ಲಿ ಆರೂ ದಿನ ನೀಡುವುದರ ಜೊತೆಗೆ ಮೊಟ್ಟೆಯನ್ನೂ ವಿತರಿಸಲು ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ ಎಂದರು.
2 ಲಕ್ಷ ಅನುದಾನ: ಶಾಲೆಯ ಅಭಿವೃದ್ಧಿಗೆ ತಮ್ಮ ನಿಧಿಯಿಂದ 2 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ, ಸಂಸದರು ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮತ್ತು ಸರ್ಕಾರದ ಸವಲತ್ತು ದೊರಕಿಸಿ ಕೊಡುವ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ, ಪ್ರತಿವರ್ಷ ಶಾಲೆಗೆ ಸೇರ್ಪಡೆಗೊಳ್ಳುವ ಬಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದಾಗಿ ಆರು ಕೊಠಡಿಗಳ ಕೊರತೆ ಇದೆ. ಅದರ ನಿರ್ಮಾಣಕ್ಕೆ 5 ಲಕ್ಷ ಅಗತ್ಯವಿದ್ದು, ಅದನ್ನು ಒದಗಿಸಿ ಕೊಡುವಂತೆ ಹಾಗೂ ಸಂಸ್ಥೆಯಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಅನುಮತಿ ದೊರಕಿಸಿಕೊಡುವಂತೆ ವೇದಿಕೆಯಲ್ಲಿದ್ದ ಗಣ್ಯರಿಗೆ ಮನವಿ ಮಾಡಿದರು.
ಇದೇ ವೇಳೆ ಜೀವನ ಸಂಧ್ಯಾ ವೃದ್ಧಾಶ್ರಮದ ಅಧ್ಯಕ್ಷ ಎಂ.ಆರ್. ಗುರುಮೂರ್ತಿ ಶಾಲೆಯ ಅಭಿವೃದ್ಧಿಗೆ 50 ಸಾವಿರ ಚೆಕ್‌ಅನ್ನು ನೀಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್.ಎಸ್. ರಾಮಚಂದ್ರ, ನಿರ್ದೇಶಕಿ ಗೀತಾ ಸುಂದ್ರೇಶ್, ದಾನಿ ಟಿ.ಎನ್. ಲಕ್ಷಣರಾಜು, ಜಿಲ್ಲಾ ಕಾಂಗ್ರೆಸ್ ಮುಖಂಡ ಜಾರ್ಜ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಪಿ.ಎನ್. ವಾಳದ್ ನಿರೂಪಿಸಿದರು. ಆರ್. ಶ್ರೀನಿವಾಸ್ ಸ್ವಾಗತಿಸಿದರು. ಶಿಕ್ಷಕ ಬಿ. ಸಿದ್ದಯ್ಯ ವಂದಿಸಿದರು.