ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

20ರಿಂದ ರಾಗಿ ಖರೀದಿ ಕೇಂದ್ರ ಪ್ರಾರಂಭ: ಡಿಸಿ

Lingaraj Badiger
Updated On : 11 Jan 2014, 11:11 am

ಚಿಕ್ಕಮಗಳೂರು: ಜಿಲ್ಲೆಯಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಸಲು ಖರೀದಿ ಕೇಂದ್ರಗಳನ್ನು ಜ.20 ರಿಂದ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ ಪೋರ್ರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸಲು ರೈತರಿಂದ ಪ್ರತಿ ಕ್ವಿಂಟಾಲ್ ರಾಗಿಗೆ ಸರ್ಕಾರ ನಿಗಧಿ ಪಡಿಸಿರುವ 1800 ಬೆಂಬಲ ಬೆಲೆಯಡಿಯಲ್ಲಿ ರಾಗಿ ಖರೀದಿಸಲಾಗುವುದು ಎಂದರು.
ಖರೀದಿ ಕೇಂದ್ರಗಳನ್ನು ಜಿಲ್ಲೆಯ ಶಿವನಿ, ಪಂಚನಹಳ್ಳಿ, ಕಡೂರು ಹಾಗೂ ಅಂತರಗಟ್ಟೆಯಲ್ಲಿ ಜ.20 ರಿಂದ ತೆರೆಯಲಾಗುವುದು ಎಂದ ಅವರು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಖರೀದಿ ಕೇಂದ್ರದಲ್ಲಿ ರೈತರಿಂದ ಪೂರ್ಣ ಪ್ರಮಾಣದ ಶುದ್ಧ ಸ್ಥಿತಿಯಲ್ಲಿರುವ ಹಾಗೂ ದೃಢೀಕರಿಸಿದ ಗುಣಮಟ್ಟದ ರಾಗಿ ಮಾತ್ರ ಖರೀದಿಸಲಾಗುವುದು ಎಂದರು.
ಖರೀದಿ ಕೇಂದ್ರದಲ್ಲಿ ರಾಗಿ ಶೇಖರಣೆ ಲಭ್ಯವಿರುವ ಗೋದಾಮುಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಖರೀದಿ ಕೇಂದ್ರದಲ್ಲಿ ನುರಿತ ಮತ್ತು ಅನುಭವಿ ಸಿಬ್ಬಂದಿಗಳನ್ನು ನಿಯೋಜಿಸುವುದರ ಜೊತೆಗೆ ರೈತರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿದರು.
ಅಲ್ಲದೆ ಖರೀದಿ ಕೇಂದ್ರದಲ್ಲಿ ಸುಸ್ಥಿತಿಯಲ್ಲಿರುವ ತೂಕ ಮಾಡುವ ಯಂತ್ರ ಮಾಯಿಶ್ಚರ್ ಮೀಟರ್ ಬಳಕೆ ಮಾಡಬೇಕೆಂದು ಸಹ ಸೂಚನೆ ನೀಡಿದರು.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕಿ ರೂಪ ಮಾತನಾಡಿ, ರೈತರು ಬೆಂಬಲ ಬೆಲೆಯಡಿಯಲ್ಲಿ ಮಾರುವಾಗ ರಾಗಿ ದಾಸ್ತಾನಿನ ಎಫ್.ಎ.ಓ. ಗುಣಮಟ್ಟದ ಬಗ್ಗೆ ದೃಢೀಕರಣ ಪತ್ರ ಪಡೆದಿರಬೇಕು, ಪಹಣಿ ಅಥವಾ ಬೆಳೆ ದೃಢೀಕರಣ ಪತ್ರದೊಂದಿಗೆ 50 ಕೆ.ಜಿ. ತೂಕದ ಗೋಣಿಚೀಲಗಳಲ್ಲಿಯೇ ಸರಬರಾಜು ಮಾಡಬೇಕೆಂದರು.
ಸಭೆಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಎ. ಜಯರಾಂ, ಸಹಾಯಕ ನಿರ್ದೇಶಕ ಆರ್. ಸದಾಶಿವಪ್ಪ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement