ಅರಣ್ಯ ವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ
ಚಿಕ್ಕಮಗಳೂರು: ಮೂಲ ಅರಣ್ಯ ವಾಸಿಗಳಿಗೆ ರಸ್ತೆ, ಕುಡಿಯುವ ನೀರು ಒಳಗೊಂಡಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡುತ್ತಿದ್ದರು.
ಅರಣ್ಯದಲ್ಲಿ ವಾಸಿಸುವ ಜನರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರಿನಂತಹ ಸೌಲಭ್ಯ ನೀಡುವ ಸಾರ್ವಜನಿಕ ಉದ್ದೇಶದ ಕಾಮಗಾರಿಗಳಿಗೆ ಅರಣ್ಯ ಭೂಮಿ ಎಂದು ತೊಡಕು ಬಂದಲ್ಲಿ ಅರಣ್ಯ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯದೊಂದಿಗೆ ಚರ್ಚಿಸಿ ಪ್ರಾಧಿಕಾರಕ್ಕೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅರಣ್ಯ ಇಲಾಖೆಯ ಅನುಮತಿ ಪಡೆದು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಅರಣ್ಯ ಗಡಿ ಗುರುತಿಸಿ: ಅರಣ್ಯ ಹಕ್ಕುಗಳ ಕಾಯ್ದೆ ಜಾರಿಗೆ ಬಂದಿರುವುದು ಅರಣ್ಯ ವಾಸಿಗಳ ಅನುಕೂಲಕ್ಕಾಗಿ ಎಂದ ಸಚಿವರು, ಈ ಹಿಂದೆ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಅರಣ್ಯ ವಾಸಕ್ಕೆ ಹಕ್ಕು ಪತ್ರ ಪಡೆದಿದ್ದು, ಉಳಿದ ಅರಣ್ಯ ವಾಸಿಗಳಿಂದ ಪುನಃ ಅರ್ಜಿಗಳನ್ನು ಪಡೆದು ಅವರಿಗೆ ಅರಣ್ಯ ಹಕ್ಕು ಪತ್ರವನ್ನು ನೀಡಲು ಕ್ರಮ ವಹಿಸಬೇಕೆಂದು ತಿಳಿಸಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಸರ್ವೇ ಕಾರ್ಯ ಕೈಗೊಂಡು ಅರಣ್ಯದ ಗಡಿ ಭಾಗವನ್ನು ಗುರುತು ಪಡಿಸಬೇಕೆಂದು ಹೇಳಿದರು.
ಕಾಮಗಾರಿಗಳಿಗೆ ಸಹಕರಿಸಿ: ಅಯ್ಯನಕೆರೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಕಾಮಗಾರಿಗಳ ಕೈಗೆತ್ತಿಕೊಳ್ಳುತ್ತಿದ್ದ ಇದಕ್ಕೆ ಅರಣ್ಯ ಪ್ರದೇಶ ಎಂಬುದಾಗಿ ಹೇಳಿ ವಿನಾ ಕಾರಣ ಅಡ್ಡಿಪಡಿಸದೆ ಇಂತಹ ಕಾಮಗಾರಿಗಳಿಗೆ ಸಹಕರಿಸಬೇಕೆಂದರು.
ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಕೆಲವು ಭಾಗದ ಅರಣ್ಯ ವಾಸಿಗಳ ಮನೆಗೆ ವಿದ್ಯುತ್ಚ್ಚಕ್ತಿ ಸೌಕರ್ಯ ಕಲ್ಪಿಸಿಕೊಡಲು ವಿದ್ಯುತ್ ತಂತಿ ಹಾಕುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಡ್ಡಿಪಡಿಸುತ್ತಿದ್ದು, ಇದರಿಂದ ಅರಣ್ಯ ವಾಸಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ವಿಳಂವಾಗುತ್ತಿದೆ. ಶಾಲೆಯ ಆವರಣಗಳಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಶೀಘ್ರದಲ್ಲಿಯೇ ತೆರವುಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಅರಣ್ಯ ಕಾರ್ಯಪಡೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಗುರು, ವನ್ಯ ಜೀವಿ ಸಂರಕ್ಷಣಾ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರ, ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಾದವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್, ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ, ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ ಹಾಗೂ ಮತ್ತಿತರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.