23 ರಿಂದ ಯೋಗ ಪ್ರಶಿಕ್ಷಣ ಶಿಬಿರ
ಚಿಕ್ಕಮಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ಜ. 23 ರಿಂದ 26ರವರೆಗೆ ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರ ನಡೆಯಲಿದೆ.
ಜ. 23ರ ಬೆಳಿಗ್ಗೆ 11 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಪತಂಜಲಿ ಯೋಗ ಶಿಕ್ಷಣ ನಗರ ಸಮಿತಿ ಅಧ್ಯಕ್ಷ ಬಿ.ಎಸ್. ನಾಗಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಶ್ವಸ್ಥ ಮಂಡಳಿಯ ಪ್ರಧಾನ ಸಂಚಾಲಕ ಅ.ರಾ. ರಾಮಸ್ವಾಮಿ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಜ. 25 ರಂದು ಸಂಜೆ 5.15ಕ್ಕೆ ನಡೆಯಲಿರುವ ಆರೋಗ್ಯದೆಡೆಗೆ ಯೋಗ ನಡಿಗೆ ಕಾರ್ಯಕ್ರಮವನ್ನು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಉದ್ಘಾಟಿಸಲಿದ್ದಾರೆ. ಜ. 26 ರಂದು ಮಧ್ಯಾಹ್ನ 12 ಗಂಟೆಗೆ ರಮೇಶ್ ಎನ್. ಪವಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಾಥಮಿಕ ಪ್ರಶಿಕ್ಷಣ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಆರ್. ಸಣ್ಣಸಿದ್ದೇಗೌಡ, ಸ್ವಾಭಿಮಾನ್ ಟ್ರಸ್ಟ್ನ ಸಂಚಾಲಕ ಕೆ. ದಿವಾಕರ ಭಟ್ ಉಪಸ್ಥಿತರಿದ್ದರು.