ಕಿಡಿಗೇಡಿಗಳ ಬಂಧನ: ಅಭಿನಂದನೆ
ಚಿಕ್ಕಮಗಳೂರು: ನಗರದ ದರ್ಗಾ ಅಪವಿತ್ರಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿರುವ ಜಿಲ್ಲಾ ಪೊಲೀಸ್ ಇಲಾಖೆಗೆ ವಿವಿಧ ಸಂಘಟನೆಯವರು ಅಭಿನಂದನೆ ಸಲ್ಲಿಸಿದ್ದು, ಇದರ ಹಿಂದಿರುವ ರಾಜಕೀಯ ವ್ಯಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಪುಟ್ಟರಾಜು ಹಾಗೂ ಸಿದ್ದರಾಜು ಎಂಬವರನ್ನು ಬಂಧಿಸಲಾಗಿದ್ದು, ಅವರ ಹಿಂದಿರುವ ಮತ್ತು ಕೋಮು ದಳ್ಳುರಿ ಹಚ್ಚುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಬಿಜೆಪಿಯ ಕೆಲವು ವ್ಯಕ್ತಿಗಳ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬರುತ್ತಿದ್ದು, ಅವರನ್ನು ರಕ್ಷಣೆ ಮಾಡಲು ಸಂಘ ಪರಿವಾರದ ನಾಯಕರು ಹೊರಟಿರುವುದು ಖಂಡನೀಯ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು. ಜಿಲ್ಲಾಡಳಿತ, ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ಈ ಪ್ರಕರಣದ ಹಿಂದಿರುವ ಎಲ್ಲಾ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೆ ಹೋದರೆ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.