ಡಿಕೆಶಿ, ಬೇಗ್: ಸಿಎಂ ನಿರ್ಧಾರ ಸರಿ'
ಸಾಗರ: ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರು ದೋಷಿಗಳೆಂದು ನ್ಯಾಯಾಲಯದಲ್ಲಿ ತೀರ್ಮಾನವಾಗಿಲ್ಲ. ಈ ದೃಷ್ಟಿಯಿಂದ ಮುಖ್ಯಮಂತ್ರಿಗಳು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಕ್ರಮ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಕೆ.ದಿವಾಕರ್ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಗೆ ಗುರುವಾರ ಪಕ್ಷದ ಸಾಂಸ್ಥಿಕ ಚುನಾವಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹೋರಾಟಗಾರ ಎಸ್.ಆರ್. ಹಿರೇಮಠ್ ಅವರ ಬಗ್ಗೆ ನಾನು ವಿಶೇಷವಾದ ಗೌರವ ಇರಿಸಿಕೊಂಡಿದ್ದೇನೆ. ಒಂದು ಹಂತದವರೆಗಿನ ಅವರ ಹೋರಾಟದಲ್ಲಿ ಸತ್ವವಿತ್ತು. ಇತ್ತೀಚೆಗೆ ಬಹುಶಃ ಅವರು ಪ್ರಚಾರದ ಹಿಂದೆ ಬಿದ್ದಂತೆ ಕಾಣುತ್ತಿದೆ. ಆದ್ದರಿಂದಲೆ ಡಿಕೆಶಿ, ಬೇಗ್ ಅವರ ಬೆನ್ನುಬಿದ್ದು ಸಾರ್ವಜನಿಕ ಪ್ರಚಾರ ಪಡೆಯುವ ಕೆಲಸವನ್ನು ಹಿರೇಮಠ್ ಮಾಡುತ್ತಿದ್ದಾರೆ ಎಂದು ಹೇಳಿದರು. ಲೋಕಸಭಾ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನು ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್ ನೀಡಿದರೆ ಖಂಡಿತಾ ಕಣಕ್ಕೆ ಇಳಿಯುತ್ತೇನೆ ಎಂದರು.