ವಕೀಲರ ಭವನಕ್ಕೆ 1 ಕೋಟಿ
ಶಿವಮೊಗ್ಗ: ಇಲ್ಲಿನ ನ್ಯಾಯಾಲಯ ಆವರಣದಲ್ಲಿರುವ ತಮ್ಮ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ವಕೀಲರ ಭವನದ 2ನೇ ಮಹಡಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ವಿಧಾನ ಸಭಾಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಸರ್ಕಾರ ಒಂದು ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ಟ, ಈಗ ನಿರ್ಣಾಣವಾಗುತ್ತಿರುವ ಸಂಘದ ನೂತನ ಭವನದ ಕಾಮಗಾರಿ ಪೂರ್ಣಗೊಳಿಸಲು ಸುಮಾರು 2 ಕೋಟಿ ಐದು ಲಕ್ಷ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇಷ್ಟು ಹಣ ಬಂದರೆ ಭವನದಲ್ಲಿ ಸಂಘದ ಮನೋರಂಜನಾ ಹಾಲ್, ಗ್ರಂಥಾಲಯ, ಇನ್ನಿತರ ಆವಶ್ಯಕ ಮೂಲ ಸೌಲಭ್ಯಗಳನ್ನು ಹೊಂದಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. ಈಗ ಬಿಡುಗಡೆಯಾಗಿರುವ 1 ಕೋಟಿ ಭವನದ ಎರಡನೆ ಮಹಡಿಯ ಮೇಲ್ಛಾವಣಿಯನ್ನು ಶೀಟ್ ಹಾಕಿ ಮುಚ್ಚಲು, ಇನ್ನಿತರ ಸಣ್ಣ ಪುಟ್ಟ ಕಾಮಗಾರಿಯನ್ನು ಪೂರ್ತಿಗೊಳಿಸಲು ಉಪಯೋಗಿಸಿಕೊಳ್ಳಲಾಗುವುದು ಎಂದು ವಿವರಿಸಿದರು. ಈ ಅನುದಾನ ಬಿಡುಗಡೆ ಸಹಕರಿಸಿದ ಸಿಎಂ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಸಚಿವರಾದ ಟಿ.ಬಿ. ಜಯಚಂದ್ರ, ಕಿಮ್ಮನೆ ರತ್ನಾಕರ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.