ವೈಕುಂಠ ಏಕಾದಶಿ ವಿಶೇಷ ಪೂಜೆ
ಭದ್ರಾವತಿ: ವೈಕುಂಠ ಏಕಾದಶಿ ಪ್ರಯುಕ್ತ ಶನಿವಾರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ 4.30ಕ್ಕೆ ಪರಮಪದ ಮಹಾದ್ವಾರದ ಪೂಜೆ, ವೈಕುಂಠನಾಥನ ದರ್ಶನ ಏರ್ಪಡಿಸಲಾಗಿತ್ತು. ಕುಮಾರ್ ಡೆಕೋರೇಟರ್ಸ್ನ ಸುಬ್ರಮಣಿ ಅವರು ಸುಂದರವಾಗಿ ನಿರ್ಮಿಸಿದ ವೈಕುಂಠ ಮಂಟಪದ ಸಪ್ತದ್ವಾರಗಳು ತೆರೆದುಕೊಂಡು ವೈಕುಂಠನಾಥನ ದರ್ಶನ ಪಡೆಯಲು ಭಕ್ತರು ಕೊರೆಯುವ ಚಳಿ ಲೆಕ್ಕಿಸದೆ ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ಕಾದುನಿಂತಿದ್ದರು. 4.30ಕ್ಕೆ ದೇವಾಲಯದ ಮುಖ್ಯ ಅರ್ಚಕ ಶ್ರೀ ರಂಗನಾಥಶರ್ಮ ಮತ್ತಿತರ ಋತ್ವಿಜರು ವೇದೋಕ್ತ ಮಂತ್ರಗಳ ಮೂಲಕ ಪೂಜಾದಿ ಕ್ರಿಯೆಗಳನ್ನು ಪೂರೈಸಿದ ನಂತರ ವೈಕುಂಠ ಮಂಟಪದ ಸಪ್ತದ್ವಾರಗಳು ಒಂದೊಂದಾಗಿ ತೆರೆದುಕೊಂಡವು. ಈ ಸಮಯದಲ್ಲಿ ಭಕ್ತರ ಹರ್ಷೋದ್ಗಾರಗಳು ಕೇಳಿಬಂದವು. ಒಂದೊಂದು ಬಾಗಿಲು ತೆರೆದುಕೊಂಡಾಗಲು ಭಕ್ತರು ಹರ್ಷೋದ್ಗಾರದಿಂದ ಕೈಮುಗಿದು ನಮಿಸುವುದು ಕಂಡುಬಂದಿತು. ನಂತರ ಶ್ರೀ ಗೋದಾದೇವಿ ಅಮ್ಮನವರ ಉತ್ಸವ ನಡೆಯಿತು. ಪಟ್ಟಣದ ವಿವಿಥ ಭಜನಾ ಮಂಡಳಿಯವರಿಂದ ನಗರ ಸಂಕೀರ್ತನೆ ನಡೆಯಿತು. ಕೃಷ್ಣ ಮತ್ತು ಗೆಳೆಯರ ಬಳಗದವರ ಚಂಡೆವಾದ್ಯ ವಿಶೇಷವಾಗಿ ನೋಡುಗರ ಗಮನ ಸೆಳೆಯಿತು.