ಸಾಹಿತ್ಯ ಸೃಜನಶೀಲತೆಯ ಉನ್ನತ ಸ್ಥಿತಿ'
ನರಸಿಂಹರಾಜಪುರ: ಇಂದಿನ ಯುವಜನರಲ್ಲಿ ಓದುವ, ಬರೆಯುವ ಹವ್ಯಾಸ ಹಾಗೂ ಮಾತುಗಳು ಸಹ ಕಡಿಮೆಯಾಗುತ್ತಿದೆ ಎಂದು ಶಿವಮೊಗ್ಗ ಡಿ.ವಿ.ಎಸ್.ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಟಿ.ಕೃಷ್ಣಮೂರ್ತಿ ತಿಳಿಸಿದರು. ಅವರು ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿ ಎಂ.ಪ್ರದೀಪ್ ಅವರ 'ನೀ ನೋಡ ಬಾರ ಈ ಕರುನಾಡ' ಎಂಬ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಕಥೆ, ಕವನ ರಚಿಸುವ ಹುಚ್ಚು ಬೆಳೆಸಿಕೊಂಡರೆ ಕವನಗಳು ತಾನಾಗೇ ಹುಟ್ಟುತ್ತದೆ. ಸಾಹಿತ್ಯ ಎನ್ನುವುದು ಸೃಜನಶೀಲತೆಯ ಒಂದು ಅತ್ಯುನ್ನತ ಸ್ಥಿತಿಯಾಗಿದೆ. ಸಾಹಿತ್ಯದಿಂದ ಸಂಸ್ಕೃತಿ, ಮನುಷ್ಯತ್ವ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಕ್ಕಿದರೆ ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಪೋಷುಣಿ ಮಾತನಾಡಿಂದರು. ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಪೂರ್ಣೇಶ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಅಣ್ಣಪ್ಪ ಎನ್.ಮಳೀಮಠ್, ಯುವ ಕವಿ ಎಂ.ಪಿ.ಪ್ರದೀಪ್ ಇದ್ದರು. ಶಶಿಕಲಾ ಸ್ವಾಗತಿಸಿದರು. ಅನಿತ ಮತ್ತು ಅರುಣ್ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ವಂದಿಸಿದರು.