ಹಬ್ಬದಿಂದ ಸಂಸ್ಕೃತಿ ಪರಿಚಯ
ಚಿಕ್ಕಮಗಳೂರು: ಬದುಕು ಕಟ್ಟಿ ಕೊಡುವುದು ಪ್ರಕೃತಿ. ಬದುಕು ಕಿತ್ತು ಕೊಳ್ಳುವುದು ವಿಕೃತಿ. ಲಕ್ಷಾಂತರ ಜನರ ಬದುಕು ಕಟ್ಟಿಕೊಳ್ಳಲು ನೆರವಾಗುವುದೇ ಸಂಸ್ಕೃತಿ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಮೌಂಟೆನ್ ವ್ಯೂ ವಿದ್ಯಾಸಂಸ್ಥೆಯ 52ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾನಗರದ ಕ್ಯಾಂಪಸ್ನಲ್ಲಿ ಶನಿವಾರ ಆಯೋಜಿಸಿರುವ ಮೌಂಟೆನ್ ವ್ಯೂ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿತ್ವ ಬೆಳೆಸಿಕೊಳ್ಳಿ: ಹಬ್ಬ ಎಂದರೆ ಸಂತೋಷವನ್ನು ಒಟ್ಟಾಗಿ ಸಂಭ್ರಮಿಸುವುದು. ಇಂದು ಚಿಕ್ಕಮಗಳೂರಿನ ಹಬ್ಬವೂ ಹೌದು. ಗ್ರಾಮೀಣ ಬದುಕಿನ ಪ್ರತಿಬಿಂಬ ಇಲ್ಲಿದೆ. ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಕೆಲ ನಿಮಿಷಗಳಲ್ಲೆ ಪರಿಚಯಿಸಲಾಗಿದೆ. ಪಾತ್ರಕ್ಕೆ ಜೀವ ತುಂಬಿದ ವಿದ್ಯಾರ್ಥಿಗಳನ್ನು ತಯಾರಿಸಿದ ಶಿಕ್ಷಕ ವೃಂದ ಅಭಿನಂದನಾರ್ಹ. ಎಲ್ಲ ವಿದ್ಯಾರ್ಥಿಗಳ ವ್ಯಕ್ತಿತ್ವ ಗಿರಿಯತ್ತರ ಬೆಳೆಯಲಿ ಎಂದು ಹಾರೈಸಿದರು.
ಜಿಲ್ಲಾ ವನ್ಯ ಜೀವ ಗೌರವ ಪಾಲಕ ಡಿ.ವಿ. ಗಿರೀಶ್ ಮಾತನಾಡಿ, ಪರಿಸರ, ವನ್ಯಜೀವಿಗಳ ಆಸಕ್ತಿ ಮೌಂಟೆನ್ ವ್ಯೂನಲ್ಲಿ ಓದುತ್ತಿದ್ದಾಗಲೇ ತಮ್ಮಲ್ಲಿ ಮೊಳಕೆಯೊಡೆಯಿತು. ಜೀವನವೊಂದು ರಿಲೆ ಓಟವಿದ್ದಂತೆ. ನಿರಂತರವಾಗಿ ಜ್ಞಾನವನ್ನು ತುಂಬಿಕೊಳ್ಳುತ್ತಾ ಮತ್ತೊಬ್ಬರಿಗೆ ನೆರವಾಗುವುದರ ಜೊತೆಗೆ ಸುಂದರ ಪೃಥ್ವಿಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಸಬೇಕೆಂದು ಕರೆ ನೀಡಿದರು.
ಮಕ್ಕಳ ವಿಕಸನಕ್ಕೆ ಅವಕಾಶ: ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಬೀಬಾ ಎನ್. ಪಾಷ ಮಾತನಾಡಿ, ಜಾತ್ರೆ, ಉತ್ಸವ, ಹಬ್ಬದ ಸಡಗರ ಸಂಭ್ರಮಿಸಲಾಗುತ್ತಿದೆ. ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಇಲ್ಲಿ ಉತ್ತಮ ಅವಕಾಶ ಸೃಷ್ಟಿಸಲಾಗಿದೆ. ಅತ್ಯುತ್ತಮ ಕಾರ್ಯಗಳೇ ಇಲ್ಲಿ ನಡೆಯುತ್ತವೆಂಬುದಕ್ಕೆ ಇಂದಿನ ಹಬ್ಬವೇ ಸಾಕ್ಷಿ ಎಂದರು.
ಸಂಸ್ಥಾಪಕಿ ಮೇಡಂ ಅಜ್ರಾ, ಪಲ್ಲವಿ ಸಿ.ಟಿ. ರವಿ, ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ನಿಸಾರ್ ಪಾಷ, ಪಿ.ಯು. ಪ್ರಾಂಶುಪಾಲೆ ತಸ್ನೀಮ್ ಫಾತೀಮಾ, ಪದವಿ ಕಾಲೇಜು ಪ್ರಾಂಶುಪಾಲ ಇಮ್ತಿಯಾಜ್ ಅಲಿ ಬೇಗ್, ಉಪ ಪ್ರಾಂಶುಪಾಲೆ ಜಲ್ಲಿ ಕೆ.ಜಾರ್ಜ್, ಆಡಳಿತಾಧಿಕಾರಿ ಭದ್ರೇಗೌಡ, ತಾಪಂ ಉಪಾಧ್ಯಕ್ಷ ಪುಟ್ಟೇಗೌಡ ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರಸನ್ನ ಸ್ವಾಗತಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಎಸ್. ಶಿವರಾಜ್ ವಂದಿಸಿದರು. ವಿವೇಕಪ್ರಭು ಮತ್ತು ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.