ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

28 ಕ್ಷೇತ್ರದಲ್ಲೂ ಎಎಪಿ ಸ್ಪರ್ಧೆ: ಚಂದ್ರಕಾಂತ್

Lingaraj Badiger
Updated On : 13 Jan 2014, 10:55 am

ಚಿಕ್ಕಮಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಖಜಾಂಚಿ ಚಂದ್ರಕಾಂತ್ ಹೇಳಿದ್ದಾರೆ.
ನಗರದ ವಿದ್ಯಾಭಾರತೀ ಸಭಾಂಗಣದಲ್ಲಿ ಭಾನುವಾರ ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಉಚಿತ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಕನಿಷ್ಟ 12 ರಿಂದ 15 ಅಭ್ಯರ್ಥಿಗಳನ್ನು ರಾಜ್ಯದಲ್ಲಿ ಕಣಕ್ಕಿಳಿಸಲಾಗುವುದು ಎಂದ ಅವರು, ಕರ್ನಾಟಕದ ಜನತೆ ಒಕ್ಕೊರಲಿನಿಂದ ರಾಜಕೀಯ ಪರ್ಯಾಯವನ್ನು ಅಪೇಕ್ಷಿಸುತ್ತಿರುವ ಹಿನ್ನಲೆಯಲ್ಲಿ ಇನ್ನೂ ಹೆಚ್ಚಿನ ಸ್ಪರ್ಧಾಳುಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು ಮುಂದಿನ 15 ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.
ಲೋಕಸಭಾ ಚುನಾವಣೆಗೆ ಜ.30 ರೊಳಗೆ ಯಾರು ಬೇಕಾದರೂ ತಮ್ಮನ್ನು ತಾವೇ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನಾಮಕರಣ ಮಾಡಿಕೊಳ್ಳಬಹುದಾಗಿದ್ದು, ಅಭ್ಯರ್ಥಿಗಳಾಗ ಬಯಸುವವರು ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 1200 ಜನರಿಂದ ತಮ್ಮ ನಡತೆಯ ಬಗ್ಗೆ ಪ್ರಮಾಣ ಪತ್ರವನ್ನು ಪಡೆದು ಅದನ್ನು ಕಡ್ಡಾಯವಾಗಿ ಪಕ್ಷಕ್ಕೆ ಒದಗಿಸಬೇಕು ಎಂದು ತಿಳಿಸಿದರು.
1 ಲಕ್ಷ ಸದಸ್ಯತ್ವದ ಗುರಿ: ದೆಹಲಿ ಚುನಾವಣೆ ಫಲಿತಾಂಶದ ನಂತರ ಇದುವರೆಗೆ ರಾಜ್ಯದ 85 ಸಾವಿರ ಜನ ಇಂಟರ್‌ನೆಟ್ ಮೂಲಕ ಹಾಗೂ ಅರ್ಜಿ ಮುಖಾಂತರ 46 ಸಾವಿರ ಜನ ಪಕ್ಷದ  ಸದಸ್ಯರಾಗಿದ್ದಾರೆ, ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಸದಸ್ಯತ್ವವನ್ನು ಬಯಸಿ ಬರುತ್ತಿರುವುದರಿಂದಾಗಿ ಜ.10 ರಿಂದ 20 ರವರೆಗೆ ಉಚಿತ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಜಿಲ್ಲಾ ಸಂಚಾಲಕ ಡಾ. ಕೆ. ಸುಂದರಗೌಡ, ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣಕ್ಕಾಗಿ ಆಮ್ ಆದ್ಮಿ ಪಕ್ಷದೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಇದೇ ವೇಳೆ ರಾಜ್ಯ ಖಜಾಂಚಿ ಚಂದ್ರಕಾಂತ್ ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಪಕ್ಷದ ರಾಜ್ಯ ಸಹ ಸಂಚಾಲಕ ವಿಜಯ ಶರ್ಮ, ಜಿಲ್ಲಾ ಕಾರ್ಯದರ್ಶ ಎಂ.ಆರ್. ಪೃಥ್ವಿರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement