ಏರುತ್ತಿರುವ ಕಟ್ಟಡಗಳು, ಕುಸಿಯುತ್ತಿರುವ ತೆರಿಗೆ!
ಚಿಕ್ಕಮಗಳೂರು: ಚಿಕ್ಕಮಗಳೂರು ದೊಡ್ಡ ನಗರವನ್ನಾಗಿ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮನೆಗಳ ನಿರ್ಮಾಣದ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಹೊರವಲಯದಲ್ಲಿ ಮನೆಗಳ ನಿರ್ಮಾಣದ ಕೆಲಸಗಳು ಭರದಿಂದ ನಡೆಯುತ್ತಿವೆ. ಇತ್ತ ನಗರದ ಹೃದಯ ಭಾಗದಲ್ಲಿ ಅದರಲ್ಲೂ ಐ.ಜಿ. ರಸ್ತೆ, ಕೆ.ಎಂ. ರಸ್ತೆಗಳಲ್ಲಿ ಒಂದರ ಮೇಲೊಂದು ಮತ್ತೊಂದರಂತೆ ಐದಾರೂ ಅಂತಸ್ತಿನ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಳ್ಳುತ್ತಿದೆ.
ಬಾಡಿಗೆ ಆಸೆಗೆ ಬಿದ್ದಿರುವ ಕೆಲವು ಮಾಲೀಕರು, ಕಟ್ಟಡ ನಿರ್ಮಾಣಗೊಂಡು ತಿಂಗಳಿಗೆ ಬಾಡಿಗೆ ಕೈ ಸೇರಿದರೆ ಸಾಕೆನ್ನುವ ಮನಸ್ಥಿತಿಯಲ್ಲಿದ್ದಾರೆ. ಅದುದರಿಂದ ಕಟ್ಟಡದ ಗುಣಮಟ್ಟದ ಬಗ್ಗೆ ಹಾಗೂ ಅದರಿಂದ ಸಾರ್ವಜನಿಕರಿಗೆ ಆಗಬಹುದಾದ ಅನಾನುಕೂಲದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ವರದಾನ: ಇಲ್ಲಿನ ರಸ್ತೆಗಳ ಅಗಲೀಕರಣ ಕಟ್ಟಡ ಮಾಲೀಕರಿಗೆ ವರದಾನವಾಗಿದೆ. ನೂತನವಾಗಿ ಕಟ್ಟಡ ನಿರ್ಮಾಣ ಮಾಡಬೇಕಾದರೆ ನಗರಸಭೆಯಲ್ಲಿ ಮಾಲೀಕರು ಪರವಾನಗಿ ಪಡೆಯಬೇಕು. ಆದರೆ, ಎಂ.ಜಿ. ರಸ್ತೆ ಹಾಗೂ ಐ.ಜಿ. ರಸ್ತೆ, ಕೆ.ಎಂ. ರಸ್ತೆಗಳ ಅಗಲೀಕರಣದ ವೇಳೆಯಲ್ಲಿ ಕೆಡವಿದ ಕಟ್ಟಡಗಳನ್ನು ನಿರ್ಮಾಣ ಮಾಡಲು ಮಾಲೀಕರಿಗೆ ಪರವಾನಗಿ ಪಡೆಯಬೇಕೆಂಬ ಕಡ್ಡಾಯ ನಿಯಮದಲ್ಲಿ ವಿನಾಯ್ತಿ ನೀಡಲಾಗಿತ್ತು. ಈ ವಿನಾಯ್ತಿಯನ್ನು ಕೆಲವು ಕಟ್ಟಡ ಮಾಲೀಕರು ದುರ್ಬಳಕೆ ಮಾಡಿಕೊಂಡಿರುವುದು ಬಹಳಷ್ಟು ಕಟ್ಟಡಗಳ ಇಂದಿನ ಸ್ಥಿತಿಯನ್ನು ನೋಡಿದರೆ ಗಮನಕ್ಕೆ ಬರುತ್ತದೆ.
ರಸ್ತೆಯ ಜಾಗವನ್ನು ಬಿಟ್ಟುಕೊಡುವ ವೇಳೆಯಲ್ಲಿ ಕೆಡವಿದ ಕಟ್ಟಡದ ಮುಂಭಾಗವನ್ನು ದುರಸ್ತಿಗೊಳಿಸುವ ಜತೆ ಜತೆಗೆ ಕಟ್ಟಡಗಳ ಮೇಲಿನ ಅಂತಸ್ತುಗಳನ್ನು ನಿರ್ಮಾಣ ಮಾಡಿರುವುದು ಬಹಳಷ್ಟು ಕಡೆಗಳಲ್ಲಿ ಕಂಡು ಬರುತ್ತದೆ. ಐ.ಜಿ. ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳು ಇದ್ದು, ಬಾಡಿಗೆ ಕಟ್ಟಡಗಳಿಗೆ ಡಿಮ್ಯಾಂಡ್ ಇರುವುದರಿಂದ ಮಾಲೀಕರು, ಬಾಡಿಗೆಯ ಆಸೆಗಾಗಿ ಕಟ್ಟಡದ ಆಂತಸ್ತುಗಳನ್ನು ಹೆಚ್ಚು ಮಾಡುತ್ತಿದ್ದಾರೆ.
ಪಾರ್ಕಿಂಗ್ ಸಮಸ್ಯೆ: ಜಾಗಗಳಿಗೆ ಚಿನ್ನದ ಬೆಲೆ ಬರುತ್ತಿರುವುದರಿಂದ ಕೆಲವು ಮಂದಿ ಜಾಗವನ್ನು ಖರೀದಿ ಮಾಡಿ, ಐದಾರೂ ಅಂತಸ್ತಿನ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮುಂದಾಗುವ ಪಾರ್ಕಿಂಗ್ ಅವ್ಯವಸ್ಥೆ ಗಮನಕ್ಕೆ ಬರುವಂತೆ ಕಾಣುತ್ತಿಲ್ಲ.
ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿ ಏಕಮುಖ ಸಂಚಾರ ಇದೆ. ಆದರೆ, ಐ.ಜಿ. ರಸ್ತೆಯಲ್ಲಿ ದ್ವಿಮುಖ ಸಂಚಾರ ಇದ್ದು, ಪ್ರತಿ ದಿನ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಸಂಜೆ ವೇಳೆಯಲ್ಲಿ ಈ ರಸ್ತೆಯಲ್ಲಿ ಭಾರಿ ಹಾಗೂ ಲಘು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಬಹಳಷ್ಟು ಸಂದರ್ಭದಲ್ಲಿ ವಾಹನಗಳ ನಿಲುಗಡೆಗಾಗಿ ಸ್ಥಳಾವಕಾಶ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಈಗಲೇ ನಿರ್ಮಾಣಗೊಂಡಿದೆ. ಇದೀಗ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಕಾಮಗಾರಿಗಳು ಮುಗಿದು, ಅವುಗಳಲ್ಲಿ ವ್ಯಾಪಾರ ವಹಿವಾಟು, ಕಚೇರಿಗಳು ಆರಂಭವಾದರೆ ಮುಂದೊಂದು ದಿನ ಚಿಕ್ಕಮಗಳೂರಿನ ಐ.ಜಿ. ರಸ್ತೆ ಪಾದಚಾರಿಗಳ ಪಾಲಿಗೆ ಇದ್ದು ಇಲ್ಲದಂತಾಗಲಿದೆ.
ಮಾಲೀಕರು ತಮ್ಮ ಕಟ್ಟಡಗಳನ್ನು ಮನ ಬಂದಂತೆ ಅಂತಸ್ತುಗಳ ಮೇಲೆ ಅಂತಸ್ತು ಕಟ್ಟುತ್ತಿದ್ದಾರೆ. ಕಟ್ಟಡಗಳ ನಿರ್ಮಾಣದ ಸ್ಥಿತಿಗತಿ ನೋಡಿದರೆ ನಗರಸಭೆಗೆ ಹೆಚ್ಚಿನ ತೆರಿಗೆ ಬರಬೇಕು. ಆದರೆ, ಇದೀಗ ವರ್ಷದಲ್ಲಿ ವಾಣಿಜ್ಯ ಮಳಿಗೆ ಮತ್ತು ಖಾಲಿ ಜಾಗಗಳಿಂದ ವರ್ಷಕ್ಕೆ ಬರುತ್ತಿರುವ ತೆರಿಗೆ 2.50 ಕೋಟಿ ಮಾತ್ರ. ತಾವು ನಿರ್ಮಾಣ ಮಾಡುತ್ತಿರುವ ಕಟ್ಟಡಗಳಿಗೆ ಒಟ್ಟು ವಿಸ್ತೀರ್ಣದ ಬಗ್ಗೆ ನಗರಸಭೆಯಲ್ಲಿ ಕ್ಲೇಮ್ ಮಾಡಿಕೊಂಡರೆ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಆದುದರಿಂದ ಮಾಲೀಕರು ಕಡಿಮೆ ವಿಸ್ತೀರ್ಣದ ಬಗ್ಗೆ ಮಾತ್ರ ನಗರಸಭೆ ದಾಖಲೆಯಲ್ಲಿ ನಮೂದಿಸಿ ಟ್ಯಾಕ್ಸ್ ವಂಚಿಸುತ್ತಿದ್ದಾರೆ.
5ಕೋಟಿ ತೆರಿಗೆ: ಐ.ಜಿ. ರಸ್ತೆ ಸೇರಿದಂತೆ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಚದರ ಅಡಿಯ ಮೇಲೆ ಟ್ಯಾಕ್ಸ್ ನಿಗದಿಪಡಿಸಿದರೆ, ನಗರಸಭೆಗೆ ವರ್ಷದಲ್ಲಿ ಸುಮಾರು 5 ಕೋಟಿ ತೆರಿಗೆ ಸಂಗ್ರಹವಾಗಲಿದೆ. ಅದಕ್ಕಾಗಿ ನಗರಸಭೆ ಪ್ರತಿ ವಾಣಿಜ್ಯ ಮಳಿಗೆಗಳನ್ನು ಅಳತೆ ಮಾಡಿ ಟ್ಯಾಕ್ಸ್ ನಿಗದಿಪಡಿಸಬೇಕು. ಈ ಕೆಲಸಕ್ಕೆ ಇದೊಂದು ಸೂಕ್ತವಾದ ಸಮಯ. ಕಾರಣ, ಸದ್ಯ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲ. ಜನಪ್ರತಿನಿಧಿಗಳು ನಗರಸಭಾ ಆಡಳಿತದಲ್ಲಿ ಎಂಟ್ರಿಕೊಟ್ಟರೆ, ಕಟ್ಟಡಗಳಿಗೆ ಟ್ಯಾಕ್ಸ್ ನಿಗದಿಪಡಿಸುವ ಕೆಲಸದಲ್ಲಿ ಹಸ್ತಾಕ್ಷೇಪ ಮಾಡುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ನಗರಸಭೆ ತುರ್ತಾಗಿ ಈ ಕೆಲಸಕ್ಕೆ ಕೈ ಹಾಕಿದರೆ ಹೆಚ್ಚಿನ ಟ್ಯಾಕ್ಸ್ ಸಂಗ್ರಹವಾಗಲಿದೆ.
ಇದರ ಜತೆಗೆ ಮನ ಬಂದಂತೆ ನಿರ್ಮಾಣ ಆಗುತ್ತಿರುವ ಕಟ್ಟಡಗಳಿಗೆ ಕಡಿವಾಣ ಹಾಕಬೇಕಾದರೆ ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿರುವುದನ್ನು ಪರಿಶೀಲಿಸುವ ಕೆಲಸ ಮಾಡಬೇಕು. ಹಾಗಾದರೆ ಮಾತ್ರ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪಾರ್ಕಿಂಗ್ ಸಮಸ್ಯೆಗೆ ಈಗಲೇ ಕಡಿವಾಣ ಬೀಳಲಿದೆ.
-ಆರ್. ತಾರಾನಾಥ್