ಟಿಪ್ಪು ಸ್ಮಾರಕ ಮುಸ್ಲಿಂ ಯುವ ಸಂಘ ಉದ್ಘಾಟನೆ
ನರಸಿಂಹರಾಜಪುರ: ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೆ ಎಲ್ಲಾ ಧಾರ್ಮಿಕ
ಕ್ಷೇತ್ರಗಳಿಗೂ ಸಮನಾದ ಅನುದಾನ ನೀಡಿರುವುದಾಗಿ ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು. ಇಲ್ಲಿನ ಜಿ.ಆರ್. ಮಿಲ್ ರಸ್ತೆಯ ಸಹಾರ ಕನ್ವೆನ್ಷನ್ ಹಾಲ್ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಟಿಪ್ಪು ಮೆಮೋರಿಯಲ್ ಮುಸ್ಲಿಂ ಯೂತ್ ಅಸೋಸಿಯೇಷನ್ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ನಿಜಾಮುದ್ದೀನ್ ಮುಸ್ಲಿಂ ಧರ್ಮದವರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ. ಈ ಸಮುದಾಯ ಉತ್ತಮ ಶಿಕ್ಷಣ ಪಡೆಯುವ ಅವಶ್ಯಕತೆ ಇದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಟಿಪ್ಪು ಮೆಮೋರಿಯಲ್ ಮುಸ್ಲಿಂ ಯೂತ್ ಅಸೋಸಿಯೇಷನ್ನ ಅಧ್ಯಕ್ಷ ಎಸ್.ಎಂ.ನಯಾಜ್ ಮಾತನಾಡಿದರು. ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪಿ.ಜೆ. ಆಂಟೋನಿ, ದರ್ಗಾ ಕಮಿಟಿ ಮಾಜಿ ಅಧ್ಯಕ್ಷ ಕಾಸಿಂಖಾನ್, ಪಪಂ ಸದಸ್ಯ ನಜೀರ್ ಅಹಮ್ಮದ್, ವಕೀಲ ಸಂತೋಷಕುಮಾರ್, ಮುಖಂಡ ರಫೀಕ್ ಉಪಸ್ಥಿತರಿದ್ದರು. ಸಮಾಜ ಸೇವೆ ಸಾಧಕರಾದ ವೈದ್ಯ ಡಾ. ಪ್ರಸನ್ನಕುಮಾರ್, ಶುಶ್ರೂಷಕಿ ಮಹಬೂಬ್, ದಿವ್ಯ ಕಾರುಣ್ಯ ಆಶ್ರಮದ ಲಿಸ್ಸಿ, ಗಣಿತಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ಎನ್.ಇ.. ಪಿರ್ದೋಸ್ ಹಾಗೂ ಸಮಾಜ ಸೇವಕಿ ಜುಬೇದಾ ಅವರನ್ನು ಸನ್ಮಾನಿಸಲಾಯಿತು. ಹಕೀಬ್ ಸ್ವಾಗತಿಸಿದರು. ಅಂಜುಮುಲ ನಿರೂಪಿಸಿದರು. ಜುಬೇದ ವಂದಿಸಿದರು.