ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮುದ್ರಣ ಮಾಧ್ಯಮಕ್ಕೆ ಹೊಸ ತಂತ್ರಜ್ಞಾನ ಬಳಸಿ

Lingaraj Badiger
Updated On : 13 Jan 2014, 10:48 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಜ.12
ಮುದ್ರಣ ಮಾಧ್ಯಮದಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಎಸ್. ನರೇಂದ್ರ ಕರೆ ನೀಡಿದ್ದಾರೆ.
ನಗರದ ಶ್ರೀರಾಮಮಂದಿರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮುದ್ರಣಕಾರರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು ಐದು ದಶಕಗಳ ಮುದ್ರಣಕರ ಇತಿಹಾಸದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸಂಘ ರಚಿಸಿ ನೋಂದಾಯಿಸಿದ ಹೆಮ್ಮೆ ನಮಗಿದೆ.  65 ಸ್ಥಾಪಕ ಸದಸ್ಯರಿದ್ದು, ಇಚ್ಛಾಶಕ್ತಿಯ ಕೊರತೆಯಿಂದ ಹಾಗೂ ವೈಯುಕ್ತಿಕ ಅಭಿಪ್ರಾಯದಿಂದ ಕೆಲವರು ಹೊರಹೋಗಿದ್ದಾರೆ.  ಸದಸ್ಯರಿಗೆ ಜೀವವಿಮೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಸಂಘವನ್ನು ಮುನ್ನಡೆಸಲು ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದರು.
ಪ್ರಾಥಮಿಕ ಮಾಹಿತಿ ಅಗತ್ಯ: ಆಡಿಟರ್ ಆರ್. ರವಿ ಮಾತನಾಡಿ, ನೋಂದಾಯಿತ ಸಂಸ್ಥೆ ನೀತಿ, ನಿಯಮಗಳಿಗೆ ಅನುಗುಣವಾಗಿ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಎಲ್ಲ ಸದಸ್ಯರಿಗೂ ಪ್ರಾಥಮಿಕ ಮಾಹಿತಿಯ ಅರಿವಿದ್ದರೆ ಪ್ರಗತಿ ಸುಲಭ ಎಂದು ಹೇಳಿದರು.
ಹಿರಿಯ ಮುದ್ರಣಕಾರ ರಾಮದಾಸ್ ಮಾತನಾಡಿ, ರಚನಾತ್ಮಕವಾಗಿ ಸಂಘ ಕಾರ್ಯನಿರ್ವಹಿಸಬೇಕು. ವಾರ್ಷಿಕ ಕಾರ್ಯಸೂಚಿ ರಚಿಸಿಕೊಳ್ಳಬೇಕು. ತಿಂಗಳಿಗೊಂದಾದರೂ ಚಟುವಟಿಕೆ ನಡೆಸಿದರೆ ಜೀವಂತಿಕೆ ಉಳಿಯುತ್ತದೆ ಎಂದು ತಿಳಿಸಿದರು.
ಮುದ್ರಣಕಾರ ಹರಿಸಿಂಗ್ ಮಾತನಾಡಿ, 1985ರಲ್ಲಿ 47 ಮುದ್ರಣಾಲಯಗಳಿದ್ದು,  ಇಂದು ಅನೇಕ ಪಟ್ಟು ಬೆಳೆದಿದೆ.  ಆದರೆ ಮುದ್ರಣಕಾರರ ಸ್ಥಿತಿ ಸುಧಾರಿಸಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಕಲಿಯುಗದಲ್ಲಿ ಸಂಘಶಕ್ತಿಗೆ ಹೆಚ್ಚು ಮಾನ್ಯತೆ.  ಮುದ್ರಣಕಾರರೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಿ ಧ್ವನಿಯೆತ್ತಿದರೆ ಸಮಾಜ ಮತ್ತು ಸರ್ಕಾರ ಸ್ಪಂದಿಸುತ್ತದೆ. ಸೌಹಾರ್ದ ಸಹಕಾರಿ ಕಾಯ್ದೆಯಡಿ ಸಂಸ್ಥೆ ರಚಿಸಿಕೊಂಡು ವ್ಯವಹರಿಸಿದರೆ ಲಾಭದ ಜೊತೆಗೆ ಸದಸ್ಯರ ಅವಶ್ಯಕತೆಗಳನ್ನು ಪೂರೈಸಬಹುದೆಂದರು.
ಉಪಾಧ್ಯಕ್ಷ ಎಸ್. ಹಾಲಪ್ಪಶೆಟ್ಟಿ, ಮೂಡಿಗೆರೆಯ ರಮೇಶ್, ಕಳಾಸಪುರದ ದಿನೇಶ್, ಹೊನ್ನಪ್ಪಶೆಟ್ಟಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಎಚ್.ಬಿ. ಗೋಪಿನಾಥ ಸ್ವಾಗತಿಸಿದರು,  ಸಹ ಸಂಘಟನಾ ಕಾರ್ಯದರ್ಶಿ ಸೋಮಸುಂದರ್ ಕಾರ್ಯಕ್ರಮ ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.  ಖಜಾಂಚಿ ನವೀನಕುಮಾರ್ ಲೆಕ್ಕಪತ್ರ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement