ವಿದ್ಯುತ್ ಕಂಬ ಧರೆಗೆ ಇಂದೋ... ನಾಳೆಯೋ?
ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಉರುಳಿ ಬೀಳುವ ಹಂತದಲ್ಲಿದ್ದು ಸುತ್ತಮುತ್ತಲಿನ ಮನೆಗಳವರು ಪ್ರತಿದಿನ ಪ್ರಾಣ ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಂಬ ಸರಿಪಡಿಸಿ ಬದಲಿಸುವಂತೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಲವು ದಶಕಗಳಷ್ಟು ಹಳೆಯದಾಗಿರುವ ಈ ಕಂಬವನ್ನು ಮೆಸ್ಕಾಂ ಬದಲಿಸುತ್ತಿಲ್ಲ. ಕಬ್ಬಿಣದ ಈ ಕಂಬಗಳು ಸಂಪೂರ್ಣ ತುಕ್ಕು ಹಿಡಿದಿವೆ. ಯಾವ ಕ್ಷಣದಲ್ಲಾದರೂ ಅಕ್ಕಪಕ್ಕದ ವಾಸದ ಮನೆಗಳ ಮೇಲೆ ಬೀಳುವ ಸಾಧ್ಯತೆ ಇದೆ.
ಈ ಕುರಿತು ಗ್ರಾಮಸ್ಥರು ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಸಾಕಷ್ಟು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮೆಸ್ಕಾಂನ ಕಾರ್ಯವೈಖರಿಯ ಬಗ್ಗೆ ದೂರು ನೀಡಲಾಗುವುದು.
ಈಗಾಗಲೇ ಎಲ್ಲ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳಿಗೆ ದೂರು ಕೊಟ್ಟು ಸೋತಿರುವ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅಪಾಯ ತಪ್ಪಿಸಬೇಕು. ಇಲ್ಲದಿದ್ದಲ್ಲಿ ಮೆಸ್ಕಾಂ ಇಲಾಖೆಯ ನಿರ್ಲಕ್ಷದ ವಿರುದ್ಧ ಹೋರಾಟ ಮಾಡಲಾಗುವುದು.
-ಮಂಜುನಾಥ, ಸಂಜೀವಪ್ಪ, ಮಲ್ಲೇಶಪ್ಪ, ಸಿಂಗಟಗೆರೆ.
ಪರಿಸರ ಕಲುಷಿತ: ಕ್ರಮಕ್ಕೆ ಒತ್ತಾಯ
ಮೂಡಿಗೆರೆ ಪಟ್ಟಣದ ಕಡೂರು-ಮಂಗಳೂರು ರಸ್ತೆಯ ಅಕ್ಕಪಕ್ಕದಲ್ಲಿ ಕೋಳಿ ಕಸ ಸೇರಿ ದಂತೆ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹೋಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿಯವರು ಸೂಕ್ತ ಕ್ರಮ ಜರುಗಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಹಳೇ ಮೂಡಿಗೆರೆ ಗ್ರಾಪಂನ ಹ್ಯಾಂಡ್‌ಪೋಸ್ಟ್ ರಸ್ತೆಯ ಬದಿಯಲ್ಲಿ ಕೋಳಿ ಕಸ ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ದುರ್ವಾಸನೆಯಿಂದಾಗಿ ರೋಗದ ಭೀತಿಯನ್ನು ಎದುರಾಗಿದೆ.
ಹರಸಾಹಸ: ಬಿದರಹಳ್ಳಿ ಬಳಿ ಚಾನಲ್‌ನಲ್ಲಿ ಕುಡಿಯುವ ನೀರಿನ ಪೈಪ್‌ಗಳು ಒಡೆದುಹೋಗಿವೆ. ಪರಿಣಾಮ ಚಾನಲ್‌ನಲ್ಲಿ ನೀರು ನಿಂತು ರೋಗಗಳು ಸೃಷ್ಟಿಯಾಗುವ ಭಿತಿ ಎದುರಾಗಿದೆ. ಧರ್ಮಸ್ಥಳಕ್ಕೆ ಹೋಗಿ ಬರುವ ಯಾತ್ರಿಕರು ಮತ್ತು ಸುತ್ತಮುತ್ತಲಿನ ಜನರು ಕೋಳಿ ಕಸ ಹಾಗೂ ನಿಂತ ನೀರಿನಿಂದ ಸೃಷ್ಟಿಯಾಗುತ್ತಿರುವ ಕ್ರಿಮಿ-ಕೀಟಗಳ ಕಾಟದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ.
ಗ್ರಾಮ ಪಂಚಾಯಿತ್‌ಗಳಿಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಕೋಳಿ ಕಸ, ನಿಂತ ನೀರು ತೆರವುಗೊಳಿಸಲು ಮುಂದಾಗಲಿ.
-ರಘುನಾಥ್, ಹೊರಟ್ಟಿ, ಮೂಡಿಗೆರೆ.