ವೇತನ ಹೆಚ್ಚಿಸದ ಸರ್ಕಾರ
ಕೊಪ್ಪ: ಅಂಗನವಾಡಿ ಕಾರ್ಯಕರ್ತರಿಗೆ ಕೆಲಸದ ಒತ್ತಡ ಅಧಿಕವಾಗಿದೆ. ವೇತನ ಹೆಚ್ಚಳಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದ ನೂತನ ಅಧ್ಯಕ್ಷೆ ಕೆ.ವಿ.ರೇಣುಕ ಹೇಳಿದರು.
ಇಲ್ಲಿನ ಪುರಭವನದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿ ಅವರು ಮಾತನಾಡಿದರು.
ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಅಂಗನವಾಡಿ ಕೇಂದ್ರಗಳಲ್ಲಿ ಇರಬೇಕೆಂಬ ನಿಯಮ ಸರಿಯಲ್ಲ. ಈ ಹಿಂದೆ ಮಧ್ಯಾಹ್ನ 1.30 ರವರೆಗೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ನಂತರ 4 ಗಂಟೆವರೆಗೆ ಮನೆ ಮನೆ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ವೇಳಾಪಟ್ಟಿ ಅನುಷ್ಠಾನಗೊಳಿಸಲು ಸಂಘ ಹೋರಾಟ ರೂಪಿಸಬೇಕು ಎಂದರು.
ಬದುಕಿಲ್ಲದಂತಾಗಿದೆ: ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಆಟಪಾಠ, ವಿರಾಮಕ್ಕೆ ಅಗತ್ಯ ಪರಿಕರಗಳನ್ನು ಸರ್ಕಾರ ಒದಗಿಸಬೇಕು. ಮಕ್ಕಳು ಮಲಗಲು ಚಾಪೆ ಸಾರ್ವಜನಿಕರಿಂದ ಬೇಡಿ ಪಡೆಯುವ ಪರಿಸ್ಥಿತಿ ಇದೆ. ಈಗ ನಿಗದಿ ಮಾಡಿರುವ ಸಮಯದಿಂದಾಗಿ ತಾಯಿ- ಮಗುವಿನ ಬಾಂಧವ್ಯ ಕಡಿದು ಹೋಗುತ್ತದೆ. ಕೂಲಿ ಮಾಡಲು ಹೋಗುವ ತಾಯಂದಿರು ವಾರಕ್ಕೊಮ್ಮೆ ಮಕ್ಕಳೊಂದಿಗೆ ಬೆರೆಯುವ ಅವಕಾಶ ದೊರೆಯುತ್ತಿದೆ. ಅಂಗನವಾಡಿ ಸಹಾಯಕರು ಮಕ್ಕಳನ್ನು 4 ಗಂಟೆ ನಂತರ ಮನೆ ಮನೆಗೆ ಕರೆದೊಯ್ಯುವಲ್ಲಿ ಹೈರಾಣಾಗುತ್ತಿದ್ದಾರೆ. ಅವರಿಗೆ ಕೌಟುಂಬಿಕ ಬದುಕು ಇಲ್ಲದಂತಾಗಿದೆ ಎಂದರು.
ಪದಾಧಿಕಾರಿಗಳ ಆಯ್ಕೆ: ಕೆ.ವಿ. ರೇಣುಕಾ (ಅಧ್ಯಕ್ಷೆ), ಪಿರಿನ್ ಡಿಸೋಜಾ (ಕಾರ್ಯದರ್ಶಿ), ಪ್ರೇಮ ಎಸ್. (ಉಪಾಧ್ಯಕ್ಷೆ), ವಿದ್ಯಾಶಾಲಿನಿ, ತೆಲ್ಮಾ ಸಾಲ್ಡಾನಾ, ಎಚ್.ವಿ. ವೀಣಾ, ನಾಗರತ್ನ, ಪ್ರೇಮಾ, ಶೋಭಾ, ಜಾನಕಿ,ಪ್ರೇಮಾಶೆಟ್ಟಿ, ವಾಸಂತಿ, ಶಕುಂತಲಾ, ಯಶೋದಾ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾದರು.