ಅಭಿಲಾಷೆ ಇಲ್ಲದೆ ಬದುಕೋದು ಅಸಾಧ್ಯ
ಬಾಳೆಹೊನ್ನೂರು: ಜೀವನದಲ್ಲಿ ಅಭಿಲಾಷೆ ಇಲ್ಲದೆ ಬದುಕು ನಡೆಸುವುದು ಅಸಾಧ್ಯ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ವಿ. ರವೀಂದ್ರನಾಥ್ ಠ್ಯಾಗೋರ್ ಹೇಳಿದರು.
ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ಬಾಳೆಹೊನ್ನೂರು ವಿದ್ಯಾಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಅಧಿಕಾರ, ಶ್ರೀಮಂತಿಕೆ ಬಂದಾಗ ಪೂರ್ವಜನ್ಮ, ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಮರೆಯುವುದು ವಿಪರ್ಯಾಸ. ಸತ್ಕಾರ, ಸನ್ಮಾನಗಳು ನಾವು ಹಾಕುವ ಬಂಡವಾಳವಾಗಿದ್ದು, ಸಾಧನೆಗಳು ಮಾತಾಗಬೇಕೇ ಹೊರತು ಮಾತುಗಳು ಸಾಧನೆಯಾಗಬಾರದು ಎಂದು ಹೇಳಿದರು.
ಶ್ರಮಿಸಿ: ಹಳೆಯ ವಿದ್ಯಾರ್ಥಿ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ತಾವು ಕಲಿತ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಅಲ್ಪ ಮಾನವರನ್ನು ವಿಶ್ವಮಾನವರನ್ನಾಗಿ ಮಾಡಬೇಕಾದ ಕರ್ತವ್ಯ ಹಿರಿಯ ವಿದ್ಯಾರ್ಥಿಗಳ ಮೇಲಿದೆ. ತಾವು ಕಲಿತ ಶಾಲೆಗೆ ತಮ್ಮ ಕೈಲಾದ ಸಹಕಾರ ನೀಡಬೇಕಾಗಿರುವುದು ಅವರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಉಪನ್ಯಾಸಕಿ ರೇಖಾ ನಾಗರಾಜರಾವ್ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ನಾವು ಬರೀ ಮಾಹಿತಿಯೆಂಬ ಶಿಕ್ಷಣ ಮಾತ್ರ ತುಂಬುತ್ತಿದ್ದೇವೆಯೆ ಹೊರತು ವಿದ್ಯೆಯಿಂದ ದೊರೆಯುವ ಆತ್ಮಸ್ಥೈರ್ಯವನ್ನು ತುಂಬುತ್ತಿಲ್ಲ ಎಂದು ವಿಷಾದಿಸಿದರು.
ನಿಕಟ ಸಂಪರ್ಕ: ಬಾಳೆಹೊನ್ನೂರು ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ. ಗೀತಾ ಮಾತನಾಡಿ, ವಿದ್ಯಾಸಂಸ್ಥೆ ಹಾಗೂ ವಿದ್ಯಾರ್ಥಿ ಸಂಘದೊಂದಿಗೆ ನಿಕಟ ಸಂಪರ್ಕ ಬೆಳೆದು ಶಾಲೆಯ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳು ಸಹಕರಿಸಬೇಕು. ಯಾವುದೇ ವ್ಯಕ್ತಿಗಳು ಸಂಸ್ಥೆ ಹಾಗೂ ವಿದ್ಯಾರ್ಥಿ ಸಂಘದ ನಡುವೆ ಸಂಘರ್ಷ ತರುವ ಯತ್ನ ಹಾಗೂ ಜೀವನದಲ್ಲಿ ಕಾಲೆಳೆಯುವ ಪ್ರವೃತ್ತಿ ಬೇಡ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ವಹೀದ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ನಿವೃತ್ತ ಜಂಟಿ ಉಪ ನಿಬಂಧಕ ಎಚ್.ಆರ್. ಕೃಷ್ಣಯ್ಯಗೌಡ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಿರಿಯಣ್ಣ, ಶಾಲೆಯ ಮೊದಲ ವಿದ್ಯಾರ್ಥಿ ಬಿ.ಎಂ. ಲಲಿತಾ ರಾಮಪ್ಪಗೌಡ, ಪ್ರಾಚಾರ್ಯ ಪುರುಷೋತ್ತಮ್, ಸುರೇಂದ್ರ ಮಾಸ್ಟರ್, ಎಸ್.ಎಸ್. ವೆಂಕಟೇಶ್, ಚೈತನ್ಯ ವೆಂಕಿ, ದಯಾಕರ್ ಸುವರ್ಣ ಇದ್ದರು.