ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ: ಪ್ರಸಾದ್
ನರಸಿಂಹರಾಜಪುರ: ಸಮಾಜದಲ್ಲಿ ಗೌರವ ಪಡೆಯಬೇಕಾದರೆ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಜೇಸಿ ಸಂಸ್ಥೆಯ ವಲಯ 14ರ ಉಪಾಧ್ಯಕ್ಷ ಎಸ್.ಎನ್.ಎಂ. ಪ್ರಸಾದ್ ಸಲಹೆ ನೀಡಿದರು. ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಉತ್ತಮ ಸಂಸ್ಕಾರ ಪಡೆಯಬೇಕಾದರೆ ಗುರುಗಳಿಂದ ಸೂಕ್ತ ಮಾರ್ಗದರ್ಶನ ಪಡೆದಿರಬೇಕು ಎಂದು ಹೇಳಿದರು.
ನಾವು ಎಷ್ಚು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಜೀವನದಲ್ಲಿ ನಮಗೆ ಸಿಗುವ ಉತ್ತಮ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
2014ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಳಲಿ ಅಕ್ಷತ್ ಹಾಗೂ ಕಾರ್ಯದರ್ಶಿಯಾಗಿ ಕೆ. ಸಂತೋಷಕುಮಾರ್ ಹಾಗೂ ಇತರೆ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಲ್.ಎಂ. ಸತೀಶ್ ಸಮಾರಂಭ ಉದ್ಘಾಟಿಸಿದರು. 2013ನೇ ಸಾಲಿನ ಜೇಸಿ ಅಧ್ಯಕ್ಷ ಎಸ್.ಎಸ್. ಗಿರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಂಜನಗೂಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ನವಿಲೂರು ಪ್ರಕಾಶ್, ಮಾಜಿ ಅಧ್ಯಕ್ಷ ವರ್ಕಾಟೆ ಸುಧಾಕರ್, 2013ನೇ ಸಾಲಿನ ಕಾರ್ಯದರ್ಶಿ ಬಿ.ಟಿ. ವಿಜಯಕುಮಾರ್, ಜೀವೇಂದ್ರಕುಮಾರ್ ಉಪಸ್ಥಿತರಿದ್ದರು.