ಕಸ್ತೂರಿ ರಂಗನ್ ವರದಿ ಹಿಂಪಡೆಯಲಿ
ಚಿಕ್ಕಮಗಳೂರು: ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಮಾಧವ ಗಾಡ್ಗೀಳ್ ಹಾಗೂ ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿಗಳು ಸರ್ಕಾರಕ್ಕೆ ನೀಡಿರುವ ಶಿಫಾರಸ್ಸುಗಳ ಕುರಿತು ಜನರ ಗಮನ ಸೆಳೆಯಲು ಫೆ. 2 ರಂದು ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದಲ್ಲಿ 'ಭವಿಷ್ಯದ ಪಶ್ಚಿಮಘಟ್ಟಗಳ ಉಳಿವಿಗೆ ಜನರ ಸಹಭಾಗಿತ್ವ' ಕುರಿತ ಕಾರ್ಯಾಗಾರವನ್ನು ಜನಸಂಗ್ರಾಮ ಪರಿಷತ್ ಹಮ್ಮಿಕೊಂಡಿದೆ.
ಪರಿಸರ ಮತ್ತು ಜೀವ ವೈವಿಧ್ಯತಾ ಈ ಕಾರ್ಯಗಾರದಲ್ಲಿ ಎಸ್.ಆರ್. ಹಿರೇಮಠ್, ಪಾಂಡುರಂಗ ಹೆಗ್ಡೆ, ಭಾರತೀಯ ವಿಜ್ಞಾನ ಸಂಸ್ಥೆಯ ಟಿ.ವಿ. ರಾಮಚಂದ್ರ, ಹರೀಶ್ ಭಟ್, ಸಿಇಎಸ್ನ ಎಂ.ಡಿ. ಸುಭಾಷ್ಚಂದ್ರ, ಮಾಧವ ಗಾಡ್ಗೀಳ್ ಸಹವರ್ತಿ ಎಂ.ಕೆ. ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಜನಸಂಗ್ರಾಮ ಪರಿಷತ್ನ ಮುಖ್ಯ ಸಂಚಾಲಕ ಯತಿರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮಾಧವ ಗಾಡ್ಗೀಳ್ ಹಾಗೂ ಡಾ. ಕಸ್ತೂರಿ ರಂಗನ್ ಅವರು ಪಶ್ಚಿಮಘಟ್ಟದ ಪರಿಸರದ ಸಂರಕ್ಷಣೆಗಾಗಿ ಹಲವು ಶಿಫಾರಸು ಮಾಡಿದ್ದಾರೆ. ಈ ವರದಿಗಳಲ್ಲಿ ಎಲ್ಲೂ ಕೂಡ ಈ ಭಾಗದ ರೈತರನ್ನು ಹೊರ ಹಾಕುವಂತೆ ಹೇಳಿಲ್ಲ. ಅಲ್ಲಿನ ಜನರ ಜೀವನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಾರದು. ಈ ವಾಸ್ತವಿಕತೆಯನ್ನು ಜನರಿಗೆ ತಿಳಿಸುವ ಕೆಲಸ ರಾಜ್ಯ ಸರ್ಕಾರದಿಂದ ಪ್ರಾಮಾಣಿಕತೆಯಿಂದ ಆಗುತ್ತಿಲ್ಲ ಎಂದು ಹೇಳಿದರು.
ಜನತೆಯ ಮುಂದಿಡಿ: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಹಿಂಪಡೆದು ಮಾಧವ ಗಾಡ್ಗೀಳ್ ವರದಿ ಜಾರಿಗೊಳಿಸಬೇಕು. ಈ ಎರಡು ಸಮಿತಿಗಳಲ್ಲಿರುವ ವರದಿ ಬಹಿರಂಗಗೊಳಿಸಿ ಅವುಗಳಲ್ಲಿನ ಅಂಶಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿಸಿ ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದರು.
ಬೇಜವಾಬ್ದಾರಿತನ: ಪರಿಸರ ಸಾಹಿತಿಯೊಬ್ಬರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಇಂತಹ ಕನ್ನಡಿಗರ ಜೀವನ್ಮರಣದ ಪ್ರಶ್ನೆಯಾಗಬಲ್ಲ ಪಶ್ಚಿಮಘಟ್ಟಗಳ ಸಂರಕ್ಷಣೆಯ ಬಗ್ಗೆ ನೀಡಲಾದ ವರದಿಗಳ ಬಗ್ಗೆ ಅದರಲ್ಲಿನ ವಾದ ವಿವಾದಗಳ ಬಗ್ಗೆ, ಚಳವಳಿಗಳ ಬಗ್ಗೆ ಒಂದು ಪ್ರತ್ಯೇಕ ಗೋಷ್ಠಿಯನ್ನಾದರೂ ಏರ್ಪಡಿಸಿ ಚರ್ಚಿಸದೆ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶವನ್ನು ಇಡೀ ಕರ್ನಾಟಕದ ಮೇಲೆ ಹೇರಹೊರಟಿರುವ ಶಕ್ತಿಗಳಿಗೆ ಮಣಿದು ಕುರುಡಾಗಿ ಅತ್ಯಂತ ಬೇಜವಾಬ್ದಾರಿತನದಿಂದ ಸರ್ವಾನುಮತದ ನಿರ್ಣಯ ಅಂಗೀಕರಿಸಿರುವುದು ಅತ್ಯಂತ ಖಂಡನಾರ್ಹ ಎಂದರು.
ಜನಸಂಗ್ರಾಮ ಪರಿಷತ್ನ ಮುಖಂಡರಾದ ಕೆ.ಎನ್. ಸೋಮಶೇಖರ್ ಹಾಗೂ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ನಾಗೇಶ್ ಅಂಗೀರಸ ಉಪಸ್ಥಿತರಿದ್ದರು.