ತಾಯಿ-ಮಗಳು ಸಾವು
ನರಸಿಂಹರಾಜಪುರ: ತಾಲೂಕಿನ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾವಣ ಗ್ರಾಮದ ತಾಯಿ ಮತ್ತು ಮಗಳು ಒಂದೇ ದಿನ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ದಾವಣದ ಬಿಳುವ ಎಂಬ ಹಳ್ಳಿಯಲ್ಲಿ ವಾಸವಾಗಿರುವ ರಂಗಯ್ಯ ಎಂಬುವರ ಪತ್ನಿ ಮಂಜುಳಾ (55) ಹಾಗೂ ಪುತ್ರಿ ಜಯ (30) ಮೃತಪಟ್ಟ ದುರ್ದೈವಿಗಳು. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳನ್ನು ಭಾನುವಾರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ನರಸಿಂಹರಾಜಪುರದಲ್ಲಿ ಆ್ಯಂಬುಲೆನ್ಸ್ ಹತ್ತಿಸಿದ ಮಂಜುಳಾ ಅವರು, ಬಸ್ಸಿನಲ್ಲಿ ಕುದುರೆಗುಂಡಿಗೆ ಪ್ರಯಾಣಿಸಿದ್ದರು. ಅಲ್ಲಿ ಬಸ್ಸಿನಿಂದ ಇಳಿಯುವಾಗ ಆಕಸ್ಮಿಕವಾಗಿ ಉರುಳಿ ಬಿದ್ದಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು 108 ವಾಹನದಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದಕ್ಕೆ ಮುನ್ನ ಮಂಜಳಾ ಅವರ ಪುತ್ರಿ ಅನಾರೋಗ್ಯ ಪೀಡಿತ ಜಯ (30) ಅವರನ್ನು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಭಾನುವಾರ ಸಂಜೆ ಆ್ಯಂಬುಲೆನ್ಸ್ನಲ್ಲಿ ಮಂಗಳೂರಿಗೆ ಕರೆದೊಯ್ಯುತ್ತಿರುವುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.