ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀರು ಸರಬರಾಜು ಸ್ಥಗಿತಗೊಳಿಸಿ ಪ್ರತಿಭಟನೆ

Rashmi Kasaragodu
Updated On : 14 Jan 2014, 11:28 am

ಚಿಕ್ಕಮಗಳೂರು: ಎತ್ತಿಗೆ ಜ್ವರ ಬಂದರೆ, ಎಮ್ಮೆ ಬರೆ.
- ಈ ಗಾದೆಯ ಮಾತನ್ನು ನೆರೆಯ ಹಾಸನ ಜಿಲ್ಲೆಯವರು ಸೋಮವಾರ ಪ್ರಯೋಗ ಮಾಡಿದ್ದಾರೆ.
ತಾಲೂಕಿನ ಕೆ.ಬಿ. ಹಾಳ್ ಗ್ರಾಮದವರು ಅಕ್ರಮವಾಗಿ ಕುಡಿಯುವ ನೀರನ್ನು ಬಳಸುತ್ತಿದ್ದು, ಅದಕ್ಕೆ ತಡೆ ಹಾಕಬೇಕಾದರೆ, ಚಿಕ್ಕಮಗಳೂರು ನಗರಕ್ಕೆ ಸರಬರಾಜು ಆಗುತ್ತಿರುವ ನೀರನ್ನು ನಿಲ್ಲಿಸಿದರೆ ಸಮಸ್ಯೆ ತಾನಾಗಿ ಬಗೆಹರಿಯುತ್ತದೆ ಎಂಬ ಉದ್ದೇಶದಿಂದ ಕಳೆದ ಒಂದು ವಾರದಿಂದ ನೀರು ಬಂದ್, ಪ್ರತಿಭಟನೆ, ಗಡುವು ಹೀಗೆ ಹಲವು ಬೆಳವಣಿಗೆಗಳು ನಡೆದಿದ್ದವು. ಸೋಮವಾರ ಬೆಳಗ್ಗೆ ಈ ಬೆಳವಣಿಗೆ ಚಿಕ್ಕಮಗಳೂರು ನಗರಕ್ಕೆ ಬರುತ್ತಿರುವ ಕುಡಿಯುವ ನೀರು ಸ್ಥಗಿತಗೊಳಿಸಿದ ಮಟ್ಟಕ್ಕೆ ತಲುಪಿತ್ತು. ಮುಂದೇನೂ ಎನ್ನುವಷ್ಟರಲ್ಲಿ ಸಮಸ್ಯೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.
ಆಗಿದ್ದೇನು? ಬೇಲೂರಿನಲ್ಲಿರುವ ಯಗಚಿ ಜಲಾಶಯದಿಂದ ಚಿಕ್ಕಮಗಳೂರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಕಳೆದ ವರ್ಷದಿಂದ ಯಗಚಿ ಜಲಾಶಯದಿಂದ ಜಾವಗಲ್ ಸುತ್ತಮುತ್ತಲಿನ 30 ಹಳ್ಳಿಗಳಿಗೆ ಹಾಗೂ ಅರಸಿಕೆರೆ ತಾಲೂಕಿನ 58 ಹಳ್ಳಿಗಳಿಗೆ ತಾಲೂಕಿನ ಕೆ.ಬಿ. ಹಾಳ್ ಮಾರ್ಗವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿದೆ.
ಕೆ.ಬಿ.ಹಾಳ್ ಗ್ರಾಮ ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಬರಗಾಲಕ್ಕೆ ತುತ್ತಾಗಿದ್ದು, ಇಲ್ಲಿ 400 ಅಡಿ ಆಳದವರೆಗೆ ಬೋರ್ವೆಲ್ ಕೊರೆಸಿದರೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಜನ ಮತ್ತು ಜಾನುವಾರು ನೀರಿನ ಹಾಹಾಕಾರ ಎದುರಿಸುತ್ತಿದ್ದಾರೆ. ಯಗಚಿಯಿಂದ ಜಾವಗಲ್ಗೆ ಹೋಗುತ್ತಿರುವ ನೀರನ್ನು ತಮ್ಮ ಗ್ರಾಮಕ್ಕೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿಕೊಂಡು ಬಂದಿದ್ದರು. ಆದರೆ, ಇದು ಸಾಧ್ಯವಿಲ್ಲ ಎಂಬುದನ್ನು ಅರಿತ ಜಿಲ್ಲಾಡಳಿತ ಈ ವಿಷಯದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ. ಅದುದರಿಂದ ಗ್ರಾಮಸ್ಥರೇ ಪೈಪ್ಲೈನ್ನಿಂದ ನೇರವಾಗಿ ಕುಡಿಯುವ ನೀರು ಪಡೆದುಕೊಳ್ಳುತ್ತಿದ್ದರು. ಇದರಿಂದಾಗಿ ಜಾವಗಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಯಿತು.
ಎಚ್ಚರಿಕೆ: ತಮಗಾಗಿ 28 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ, ನೀರು ಮಾತ್ರ ಸಿಗುತ್ತಿಲ್ಲ ಎಂಬುದನ್ನು ಮನವರಿಕೆಯಾಗಿದ್ದರಿಂದ ಜಾವಗಲ್ ಹಾಗೂ ಅರಸೀಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಯಗಚಿ ಜಲಾಶಯಕ್ಕೆ ಬಂದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ನೇತೃತ್ವವನ್ನು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ರುದ್ರೇಶ್ಗೌಡ ಅವರು ವಹಿಸಿದ್ದರು. ಕೆ.ಬಿ. ಹಾಳ್ ಗ್ರಾಮಸ್ಥರು ಪೈಪ್ಲೈನ್ನಿಂದ ನೀರು ಬಳಕೆ ಮಾಡುತ್ತಿರುವುದನ್ನು ತಕ್ಷಣಕ್ಕೆ ಕೈಬಿಡದೆ ಹೋದರೆ ಚಿಕ್ಕಮಗಳೂರಿಗೆ ಹೋಗುತ್ತಿರುವ ನೀರನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ್ದರು.
ಮತ್ತೆ ಪ್ರತಿಭಟನೆ: ಈ ಸಮಸ್ಯೆ ಗಂಭೀರ ಸ್ವರೂಪ ಪಡೆಯುವುದನ್ನು ಅರಿತ ಜಿಲ್ಲಾಡಳಿತ ಕೂಡಲೇ ಉಪ ವಿಭಾಗಾಧಿಕಾರಿಗಳನ್ನು ಕೆ.ಬಿ.ಹಾಳ್ಗೆ ಕಳುಹಿಸಿತ್ತು. ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ಸೋಮವಾರ ಯಗಚಿಯಲ್ಲಿ ಮತ್ತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನ 12 ಗಂಟೆಯ ನಂತರದಲ್ಲಿ ಚಿಕ್ಕಮಗಳೂರಿಗೆ ಬರುತ್ತಿರುವ ನೀರನ್ನು ಬಂದ್ ಮಾಡಲಾಯಿತು.
ನಂತರದಲ್ಲಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಶೇಖರಪ್ಪ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಹಾಗೂ ನಗರಸಭೆಯ ಆಯುಕ್ತ ನಾಗಭೂಷಣ್ ಹಾಗೂ ಅಧಿಕಾರಿಗಳು ಕೆ.ಬಿ. ಹಾಳ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಗಾಯತ್ರಿ ಶಾಂತೇಗೌಡ, ತಕ್ಷಣವೇ ಈ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಇಲ್ಲಿಗೆ ಶಾಶ್ವತವಾಗಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.
ಜಾವಗಲ್ಗೆ ಹೋಗುತ್ತಿರುವ ನೀರನ್ನು ತಾವು ಬಳಸಿಕೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಹೇಳಿರುವ ವಿಚಾರವನ್ನು ಯಗಚಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಗಮನಕ್ಕೆ ತಂದಾಗ ಅಲ್ಲೂ ಕೂಡ ಪ್ರತಿಭಟನೆ ಕೈಬಿಡಲಾಯಿತು.
ಸಂಜೆ 6 ಗಂಟೆಯ ನಂತರದಲ್ಲಿ ಚಿಕ್ಕಮಗಳೂರು ನಗರಕ್ಕೆ ನೀರು ಸರಬರಾಜು ಪುನಾರಂಭಗೊಂಡಿತು. ಆದರೆ, ಮಂಗಳವಾರದಂದು ನಗರದಲ್ಲಿ ನೀರು ಸರಬರಾಜಿನಲ್ಲಿ ಕೆಲವೆಡೆ ವ್ಯತ್ಯಯ ಉಂಟಾಗಬಹುದು ಎಂದು ನಗರಸಭೆಯ ಪೌರಾಯುಕ್ತ ನಾಗಭೂಷಣ್ ಅವರು “OÚ«Ú­sÚ®ÚúڒOæQ ತಿಳಿಸಿದ್ದಾರೆ. ಒಟ್ಟಾರೆ ನೀರಿಗಾಗಿ ಜಗಳಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಂತಾಗಿದೆ. ಕೆ.ಬಿ. ಹಾಳ್ ಗ್ರಾಮಸ್ಥರ ಮುಂದಿನ ನಿರ್ಧಾರದ ಮೇಲೆ ಚಿಕ್ಕಮಗಳೂರು ನಗರದ ಕುಡಿಯುವ ನೀರಿನ ಸರಬರಾಜು ನಿಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement