ಪಶುವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಸರ್ಕಾರ
ಬೆಂಗಳೂರು: ಪದವಿ ಪಡೆದರೂ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಶಿವಮೊಗ್ಗ ಹಾಗೂ ಹಾಸನ ಸರ್ಕಾರಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಮಣಿದಿರುವ ಸರ್ಕಾರ, ಪಶು ಅಧಿಕಾರಿಗಳ ಹುದ್ದೆ ನೂತನ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಹೈಕೋರ್ಟ್ ಆದೇಶದ ಮೇರೆಗೆ ಶಿವಮೊಗ್ಗ ಹಾಗೂ ಹಾಸನ ವಿವಿಗಳ ವಿದ್ಯಾರ್ಥಿಗಳ ನೂತನ ಆಯ್ಕೆ ಪಟ್ಟಿಯನ್ನು ಪಶುಸಂಗೋಪನಾ ಇಲಾಖೆ ಬಿಡುಗಡೆಗೊಳಿಸಿದ್ದು, ರಾಜ್ಯದ ವಿವಿಧ ಭಾಗಗಳ 77 ಪಶು ಅಧಿಕಾರಿಗಳ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಹಾಸನ ಮತ್ತು ಶಿವಮೊಗ್ಗ ಸರ್ಕಾರಿ ಪಶುವೈದ್ಯಕೀಯ ವಿವಿಗಳು ಕೇಂದ್ರೀಯ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆದಿಲ್ಲ ಎಂಬ ಕಾರಣಕ್ಕೆ 2011 ಹಾಗೂ 2012ನೇ ಸಾಲಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದರು. ಆಯ್ಕೆ ಪಟ್ಟಿಯಲ್ಲಿ ಈ ವಿವಿಗಳ ವಿದ್ಯಾರ್ಥಿಗಳನ್ನು ಪರಿಗಣಿಸಲು ಸರ್ಕಾರ ನಿರಾಕರಿಸಿತ್ತು. ಈ ಸಂಬಂಧ ವಿದ್ಯಾರ್ಥಿಗಳು ಕಾನೂನು ಹೋರಾಟ ನಡೆಸಿದ್ದರು. ಇವರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇವರನ್ನು ಕೂಡ ಹುದ್ದೆಗೆ ಪರಿಗಣಿಸುವಂತೆ ಸೂಚಿಸಿತ್ತು.
ಆದರೆ, 2012ರ ಡಿಸೆಂಬರ್ 12ರಂದು ಸರ್ಕಾರ ಬಿಡುಗಡೆಗೊಳಿಸಿದ್ದ ಪಶು ಅಧಿಕಾರಿಗಳ ಹುದ್ದೆಯ ಅಂತಿಮ ಪಟ್ಟಿಯಲ್ಲಿ ಈ ಅಭ್ಯರ್ಥಿಗಳನ್ನು ಪರಿಗಣಿಸಿಲ್ಲ. ಈ ಸಂಬಂಧ ಅಭ್ಯರ್ಥಿಗಳು ಮತ್ತೊಮ್ಮೆ ಹೋರಾಟ ನಡೆಸಿದ್ದರು. ಈ ಸಂಬಂಧ “OÚ«ÚsÚ ®Úúڒ ವಿಸ್ತೃತ ವರದಿ ಪ್ರಕಟಿಸಿತ್ತು. ಇವರ ಹೋರಾಟಕ್ಕೆ ಮಣಿದ ಪಶುಸಂಗೋಪನಾ ಇಲಾಖೆ ಈ ಅಭ್ಯರ್ಥಿಗಳನ್ನೊಳಗೊಂಡ ನೂತನ ಪಟ್ಟಿ ಬಿಡುಗಡೆ ಮಾಡಿದೆ. ಇವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಸಾಮಾನ್ಯ ದರ್ಜೆಯ 45 ಹುದ್ದೆಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದ್ದು, ಅದನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ಸರಿದೂಗಿಸುವುದಾಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.