'ಮಕ್ಕಳ ಆಸಕ್ತಿಗನುಗುಣವಾಗಿ ಪ್ರೋತ್ಸಾಹ ನೀಡಿ'
ಚಿಕ್ಕಮಗಳೂರು: ಪೋಷಕರು ತಮ್ಮ ಆಸೆಗನುಗುಣವಾಗಿ ಮಕ್ಕಳನ್ನು ಬೆಳೆಸಬೇಕೆಂಬುದನ್ನು ಬಿಟ್ಟು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರ ಆಸೆಗನುಗುಣವಾಗಿ ಬೆಳೆಸಿ ಪ್ರೋತ್ಸಾಹಿಸಿದರೆ ದೇಶಕ್ಕೆ ಆಸ್ತಿಯಾಗುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಬಿ. ರಾಜಪ್ಪ ಹೇಳಿದ್ದಾರೆ.
ನಗರದ ಐ.ಜಿ. ರಸ್ತೆಯ ಬಾಲಕಿಯರ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
1937ರಲ್ಲಿ ಆರಂಭವಾದ ಈ ಶಾಲೆ 3 ವರ್ಷ ಕಳೆದರೆ ಡೈಮೆಂಡ್ ಜ್ಯೂಬ್ಲಿ ಆಚರಣೆಯತ್ತ ಸಾಗುತ್ತದೆ. ಜಿಲ್ಲೆಯ ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಗ್ಗುತ್ತಿದೆ. ಆದರೆ, ಈ ಶಾಲೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರೆ ಎಸ್ಡಿಎಂಸಿ ಮತ್ತು ಖಾಸಗಿ ಸಂಸ್ಥೆಯ ಪ್ರತಿಫಲ. ಮುಖ್ಯ ಶಿಕ್ಷಕರ ಅಗತ್ಯವಿರುವ ಶಾಲೆಗಳಿಗೆ ಸದ್ಯದಲ್ಲೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾಳಜಿ: ಬೈತ್ ಉಲ್ಮಾಲ್ ಸಂಸ್ಥೆ ಶಿಕ್ಷಣ ಸಮಿತಿ ಅಧ್ಯಕ್ಷ ಮಹಮದ್ ಅಸ್ಲಂ ಮಾತನಾಡಿ, ಕಳೆದ 10 ವರ್ಷದಿಂದ ಬೈತ್ ಉಲ್ಮಾಲ್ ಸಂಸ್ಥೆಯ ಖಾಸಗಿ ಸಹಭಾಗಿತ್ವದಲ್ಲಿ ಪ್ರತಿವರ್ಷ ಈ ಶಾಲೆಯಲ್ಲಿ 3 ಲಕ್ಷ ಮೊತ್ತದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಇಬ್ಬರು ಶಿಕ್ಷಕರಿಗೆ ಸಂಸ್ಥೆ ವತಿಯಿಂದ ವೇತನ ಪೂರೈಸಲಾಗುತ್ತಿದೆ ಎಂದರು.
ಸತ್ಪ್ರಜೆ: ಸಿಪಿಐ ಮುಖಂಡ ಬಿ. ಅಮ್ಜದ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹಕ್ಕೆ ಸರ್ಕಾರಿ ಶಾಲೆಗಳು ಅವಸಾನದತ್ತ ಸಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರು ದೇಶದ ಸಂಕಲ್ಪ ಹೊತ್ತು ಶಿಕ್ಷಣ ಕಲಿಯುತ್ತಿದ್ದಾರೆ. ಕನ್ನಡದ ಜತೆ ಮಾತೃ ಭಾಷೆಯ ಮೂಲಕ ಶಿಕ್ಷಣ ಹೊಂದಿದರೆ ವೈಜ್ಞಾನಿಕವಾಗಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯಲು ಸಹಕಾರಿ ಎಂದು ಹೇಳಿದರು.
ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷೆ ಜಹಾ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಗೌರವಾಧ್ಯಕ್ಷ ನಸ್ರುಲ್ಲಾ ಶರೀಫ್, ನಗರಸಭೆ ಸದಸ್ಯ ತೇಜ್ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ. ದೇವರಾಜಪ್ಪ, ತಾಲೂಕು ಅಧ್ಯಕ್ಷ ಸುಂದ್ರೇಶ್, ಶಬ್ಬೀರ್, ಹಮೀದ್, ಜರೀನಾ ತಾಜ್, ಇಸ್ಮಾಯಿಲ್, ಹುಸೇನ್ ಹಾಜರಿದ್ದರು. ಮಹೇಶ್ವರಪ್ಪ ಸ್ವಾಗತಿಸಿ, ವಂದಿಸಿದರು.