ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಈದ್ ಮಿಲಾದ್ ಸಂಭ್ರಮದ ಆಚರಣೆ

Rashmi Kasaragodu
Updated On : 15 Jan 2014, 12:53 pm

ಚಿಕ್ಕಮಗಳೂರು: ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಸಡಗರ ಮತ್ತು ಸಂಭ್ರಮದೊಂದಿಗೆ ಮಂಗಳವಾರ ನಗರದಲ್ಲಿ ಆಚರಿಸಿದರು.
ಕಳೆದ ಒಂದು ದಶಕಕ್ಕೆ ಹೋಲಿಕೆ ಮಾಡಿದರೆ ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ಬೃಹತ್ ಮೆರವಣಿಗೆ ನಡೆಸಿದರು. ಸರಿ ಸುಮಾರು 8 ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈದ್ ಮಿಲಾದ್ ಅಂಗವಾಗಿ ಚಿಕ್ಕಮಗಳೂರಿನ ಉಪ್ಪಳ್ಳಿ ಸೇರಿದಂತೆ ಹಲವು ಬಡಾವಣೆಗಳನ್ನು ಅಲಂಕಾರಗೊಳಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ನಗರದ ವಿವಿಧ ಬಡಾವಣೆಗಳಿಂದ ಅಂಡೆ ಛತ್ರಕ್ಕೆ ಆಗಮಿಸಿದ ಮುಸ್ಲಿಮರು ಇಲ್ಲಿಂದ ಮಧ್ಯಾಹ್ನ 2.40ಕ್ಕೆ ಮೆರವಣಿಗೆ ಹೊರಟರು. ಈ ಮೆರವಣಿಗೆ ಎಂಜಿ ರಸ್ತೆ ಮೂಲಕ ಐಜಿ ರಸ್ತೆ, ಕೆಎಂ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಎಂಜಿ ರಸ್ತೆಯಿಂದ ತೆರಳಿ ಸಂಜೆ 5.30ರ ವೇಳೆಗೆ ಅಂಡೆ ಛತ್ರ ತಲುಪಿತು.
ಟಿಪ್ಪು ವೇಷಧಾರಿ ಬಾಲಕರು ಎಲ್ಲರ ಗಮನ ಸೆಳೆದರು. ಹಿರಿಯರು, ಕಿರಿಯರೆನ್ನದೆ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದರು. ಈ ಮೆರವಣಿಗೆ ನೋಡಲು ದಾರಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಬಿಗಿ ಬಂದೋಬಸ್ತ್: ಕಳೆದ ಡಿಸೆಂಬರ್ 28ರಂದು ಇಲ್ಲಿನ ಎಂಜಿ ರಸ್ತೆಯಲ್ಲಿರುವ ದರ್ಗಾ ಅಪವಿತ್ರಗೊಳಿಸಿದ್ದರಿಂದ ಘರ್ಷಣೆ ಸಂಭವಿಸಿತ್ತು. ಈ ಪರಿಸ್ಥಿತಿ ಇಂದಿಗೂ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಅದ್ದರಿಂದ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.
ಮೂಡಿಗೆರೆಯಲ್ಲಿ ಆಚರಣೆ
ಮೂಡಿಗೆರೆ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಬದ್ರಿಯ್ಯೀನ್ ಕೇಂದ್ರ, ಜುಮ್ಮಾ ಮಸೀದಿ ಹಾಗೂ ಆಲ್ ಇಹ್ ಸನ್ ಯೂತ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲುಗಳನ್ನು ವಿತರಿಸಿದರು.
ದ್ವೇಷಿಸಬೇಡಿ: ಮಜನಿ
ಕೊಪ್ಪ: ದೇಶವಾಸಿಗಳು ನೀವು ಪರಸ್ಪರ ದ್ವೇಷಿಸದಿರಿ,ಅಸೂಯೆ ಪಡದಿರಿ, ನೀವು ಪರಸ್ಪರ ದೇವನ ದಾಸರಾಗಿ ಎಂಬುದೆ ಪ್ರವಾದಿ ಮಹ್ಮದ್ ಪೈಗಂಬರರ ಸಂದೇಶ ಎಂದು ಮೊಯಿದ್ದೀನ್ ಶಾಫಿ ಜುಮ್ಮ ಮಸೀದಿಯ ಕೆ.ಎಚ್. ಇಬ್ರಾಹಿಂ ಮಜನಿ ಹೇಳಿದರು.
ಇಲ್ಲಿನ ಮೊಯಿದ್ದೀನ್ ಶಾಫಿ ಜುಮ್ಮ ಮಸೀದಿಯಲ್ಲಿ ಪೈಗಂಬರರ 1488 ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಇದ್ಮಿಲಾದ್ ಮೆರವಣಿಗೆ ಮುನ್ನಾ ಅವರು ಮಾತನಾಡಿದರು.
ಪೈಗಂಬರ ಗುಣಗಾನ ಮಾಡುವ ಹಾಡುಗಳೊಂದಿಗೆ ಸಂದೇಶ ಸಾರುವ ಘೋಷಣೆಯೊಂದಿಗೆ ಮೆರವಣಿಗೆ ಮಾಡಲಾಯಿತು. ಮೊಯಿದಿನ್ ಶಾಫಿ ಜುಮ್ಮ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್, ಸಲಾತ್ ಸಮಿತಿ ಅಧ್ಯಕ್ಷ ಎಸ್.ಕೆ. ಉಮರಬ್, ಯುವ ಸಮಿತಿ ಅಧ್ಯಕ್ಷ ಮಿಶ್ವಕ್ ಸದರ್ ರಫೀಕ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement