ನದಿಯೊಂದರ ಕತೆಗಾರ ಎನಿಸಿಕೊಳ್ಳಲು ಖುಷಿ
ಶಿವಮೊಗ್ಗ: ನದಿಯೊಂದರ ಕತೆಗಾರ ಎಂದು ಕರೆಸಿಕೊಳ್ಳುವುದಕ್ಕೆ ನನಗೆ ಖುಷಿಯಾಗುತ್ತದೆ. ಶರಾವತಿ ನದಿ ಸಂಸ್ಕೃತಿಯ ಪರಿಣಾಮ ನನ್ನ ಮೇಲೆ ಸಾಕಷ್ಟು ಆಗಿದೆ. ಸಣ್ಣ ತೊರೆಯಾಗಿ ಹುಟ್ಟುವ ಇದು ಹಳ್ಳ- ಕೊಳ್ಳಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಸಮುದ್ರ ಸೇರುವಾಗ ವಿಸ್ತಾರವಾಗುವ ಕ್ರಿಯೆ ರೋಮಾಂಚನಕಾರಿ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನಾ. ಡಿಸೋಜ ಹೇಳಿದರು.
ನಗರದಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು, ಗೇರುಸೊಪ್ಪ ಹಾಗೂ ಹೊನ್ನಾವರ ನಡುವೆ ದೋಣಿಗಳ ಸಂಸ್ಕೃತಿ ಇತ್ತು. ಜನರು ಎಲ್ಲದಕ್ಕೂ ದೋಣಿಯನ್ನೇ ಅವಲಂಬಿಸಿದ್ದರು. ಈಗ ನದಿಯ ಇಕ್ಕೆಲದಲ್ಲಿ ಹೆದ್ದಾರಿ ಆಗಿರುವುದರಿಂದ ಈ ಸಂಸ್ಕೃತಿ ಇಲ್ಲವಾಗಿದೆ ಎಂದು ಸ್ಮರಿಸಿದರು.
ಮುಳುಗಡೆ ಪ್ರದೇಶದ ಜನರ ಸಂಕಷ್ಟ ಇನ್ನೂ ಬಗೆಹರಿದಿಲ್ಲ. ಇವರು ವಲಸೆ ಹೋದ ಪ್ರದೇಶದ ಮೂಲ ನಿವಾಸಿಗಳು ಇವರನ್ನು ಒಪ್ಪಿಕೊಳ್ಳುತ್ತಿಲ್ಲ. ಅವರೊಂದಿಗೆ ಬೆರೆಯುವುದು ಇನ್ನೂ ಸಾಧ್ಯವಾಗಿಲ್ಲ. ಇತ್ತ ತುಮರಿ ಬ್ಯಾಕೋಡು ಪ್ರದೇಶದ ಜನರು ಲಾಂಚ್ ಇದ್ದರೂ ಬಳಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಜಾತ್ರೆಗೆಂದು ಬರುವ ಸಾವಿರಾರು ಜನರು ಹೋಗುವಾಗ ಇವರು ಕಷ್ಟ ಪಡುವಂತಾಗಿದೆ ಎಂದರು.
ಬದಲಾವಣೆ ತಪ್ಪಲ್ಲ: ನನ್ನ ಕಾಡಿನ ಬೆಂಕಿ ಹಾಗೂ ದ್ವೀಪ ಕಾದಂಬರಿಗಳು ಸಿನಿಮಾ ಆಗಿವೆ. ಸಾಹಿತ್ಯ, ಸಿನೆಮಾ ಎರಡೂ ಬೇರೆ ಮಾಧ್ಯಮಗಳೇ ಆಗಿವೆ. ಈ ಎರಡೂ ಸಿನೆಮಾಗಳ ಅಂತ್ಯ ನನ್ನ ಕಾದಂಬರಿಯಲ್ಲಿ ಇದ್ದಂತೆ ಆಗಿಲ್ಲ. ನಿರ್ದೇಶಕರು ನನ್ನ ಒಪ್ಪಿಗೆಯಿಂದಲೇ ಬದಲಾವಣೆ ಮಾಡಿದ್ದಾರೆ. ಇದು ತಪ್ಪೇನಲ್ಲ ಎಂದು ನಾಡಿ ಹೇಳಿದರು.
ನಾನೀಗ ಶಿವಪ್ಪನಾಯಕ ಕುರಿತ ಕಾದಂಬರಿ ಬರೆಯುತ್ತಿದ್ದೇನೆ. ಕಂದಾಯ ಪದ್ಧತಿ ಮೂಲಕ ಆಡಳಿತದಲ್ಲಿ ಶಿಸ್ತು ತಂದ ರಾಜನೀತ ಎಂದರು.
ಪ್ರವಾಸ ಬೇಕು: ಸಾಹಿತ್ಯ ಸಮ್ಮೇಳನಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು ಎಂದು ಕಸಾಪ ಅಧ್ಯಕ್ಷರು ಹೇಳಿದ್ದಾರೆ. ಇದಕ್ಕಿಂತ ಹೆಚ್ಚು ಜವಾಬ್ದಾರಿ ಇಲ್ಲ ಎಂದು ಹೇಳಿದ ಅವರು, ಸಮ್ಮೇಳನಾಧ್ಯಕ್ಷರನ್ನು ರಾಜ್ಯದ ಪ್ರತಿ ಶಾಖೆಗೆ ಭೇಟಿ ನೀಡುವಂತೆ ಮಾಡುವ ಕಾರ್ಯಕ್ರಮ ಹಿಂದೆ ಇತ್ತು. ಈಗ ಈ ಕಾರ್ಯಕ್ರಮ ಪುನಾರಂಭವಾಗಬೇಕು. ಈ ಬಗ್ಗೆ ಕಸಾಪ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದರು.
ಕೊಡಗು ಸಾಹಿತ್ಯ ಸಮ್ಮೇಳನ ಚನ್ನಾಗಿಯೇ ನಡೆಯಿತು. ಆದರೆ, ಸ್ವಾಗತ ಸಮಿತಿಗೆ ಅನುಭವದ ಕೊರತೆ ಇದ್ದುದರಿಂದ ಸ್ವಲ್ಪ ಲೋಪವಾಗಿರಬಹುದು. ಇದನ್ನೇನೂ ನಾನು ಮನಸಿನಲ್ಲಿಟ್ಟುಕೊಂಡಿಲ್ಲ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ, ಉಪಾಧ್ಯಕ್ಷರಾದ ಭಟ್, ಜೇಸುದಾನ್, ಚಂದ್ರಕಾಂತ್ ಇದ್ದರು.