ರೋಗ ಹೆಚ್ಚಳಕ್ಕೆ ಜೀವನಶೈಲಿ ಕಾರಣ
ಚಿಕ್ಕಮಗಳೂರು: ಆಧುನಿಕ ಜೀವನಶೈಲಿ ಮತ್ತು ಅಹಾರ ಪದ್ಧತಿಯಿಂದ ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದಲ್ಲಿಯೂ ಸಾಂಕ್ರಾಮಿಕ ರೋಗ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ. ಆರ್. ದೊಡ್ಡಮಲ್ಲಪ್ಪ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಲಯನ್ಸ್ ಹಾಗೂ ಲಯನೆಸ್ ಸಂಸ್ಥೆ ತಾಪಂ ಆವರಣದಲ್ಲಿ ಸಾಂಕ್ರಮಿಕ ರೋಗ ನಿರ್ಮೂಲನೆ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹಿಂದೆ ನಗರ ಮತ್ತು ಗ್ರಾಮಿಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಕೂಡಲೇ ಮನೆಮದ್ದು ಮತ್ತು ಆಹಾರಶೈಲಿಯ ಮೂಲಕ ರೋಗ ಹರಡದಂತೆ ಎಚ್ಚರ ವಹಿಸಿ ಅದನ್ನು ನಿರ್ಮೂಲನೆ ಮಾಡುತ್ತಿದ್ದರು. ಹಾಗೆಯೇ ಹಿಂದಿನವರು ಮಿತ ಆಹಾರ ಸೇವನೆ, ಮಾನಸಿಕ ಒತ್ತಡದಿಂದ ದೂರವುಳಿದು ಆರೋಗ್ಯವಂತರಾಗಿ ಇರುತ್ತಿದ್ದರು ಎಂದರು.
ಗಂಡಾಂತರ: ಆಧುನಿಕ ಜೀವನಶೈಲಿ, ದೈಹಿಕ ಶ್ರಮ ಮೊದಲಾದವುಗಳು ನಗರದ ಜತೆಗೆ ಗ್ರಾಮಿಣ ಪ್ರದೇಶವನ್ನು ಹದಗೆಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶಿಸ್ತುಬದ್ಧ ಜೀವನಶೈಲಿ, ಆಹಾರ ಪದ್ಧತಿ ಅಳವಡಿಸಿಕೊಳ್ಳದಿದ್ದಲ್ಲಿ ದೊಡ್ಡ ಗಂಡಾಂತರ ಎದುರಿಸಬೇಕಿದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ಹಿಂದೆ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಕಷಾಯದಂತಹ ಮನೆಮದ್ದು ನೀಡಲಾಗುತ್ತಿತ್ತು. ಆದರೆ, ದೃಶ್ಯ ಮಾಧ್ಯಮಗಳಲ್ಲಿ ಬರುವ ಜಾಹೀರಾತು ನೋಡಿ ವಿದೇಶಿ ಆಹಾರ ಪದ್ಧತಿಗೆ ಜೋತು ಬಿದ್ದಿರುವುದು ಅಪಾಯಕಾರಿಯಾಗಿದ್ದು, ಪೋಷಕರು ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದರು.
ಸಿಡಿಪಿಓ ವೆಂಕಟೇಶ್, ಲಯನೆಸ್ ಅಧ್ಯಕ್ಷೆ ಚಂದ್ರಾವತಿ ಶಂಕರ್ ಉಪಸ್ಥಿತರಿದ್ದರು. ಅನುಸೂಯ ಸ್ವಾಗತಿಸಿದರು, ಸತ್ಯವತಿ ರಂಗಸ್ವಾಮಿ ವಂದಿಸಿದರು.