ಸಮರ್ಥ ನಾಯಕತ್ವಕ್ಕಾಗಿ ಚುನಾವಣೆ: ಬಿಎಸ್ವೈ
ಕ.ಪ್ರ. ವಾರ್ತೆ, ತರೀಕೆರೆ.ಜ.14
ಬರಲಿರುವ ಲೋಕಸಭಾ ಚುನಾವಣೆ ಪಕ್ಷಕ್ಕೆ ಅಥವಾ ವ್ಯಕ್ತಿಗಾಗಿ ಅಲ್ಲ, ದೇಶಕ್ಕೆ ಸಮರ್ಥ ನಾಯಕತ್ವ ಒದಗಿಸುವ ಸಲುವಾಗಿ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅವರು, ಮಂಗಳವಾರ ಮಾಜಿ ಶಾಸಕ ಡಿ.ಎಸ್. ಸುರೇಶ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನಾನೀಗ ನಿರಾಳ: ಜನಾಭಿಪ್ರಾಯಕ್ಕೆ ಮಣಿದು ಬಿಜೆಪಿ ಪಕ್ಷಕ್ಕೆ ವಾಪಾಸಾಗಿದ್ದೇನೆ, ಹಿಂದೆ ಕೆಜೆಪಿಯಲ್ಲಿದ್ದಾಗ ತುಂಬಾ ಒತ್ತಡ ಇತ್ತು. ಬಿಜೆಪಿಗೆ ವಾಪಾಸಾದ ನಂತರ ನಿರುಮ್ಮಳನಾಗಿದ್ದೇನೆ. ತಮ್ಮ ಮೇಲಿನ ಜವಾಬ್ದಾರಿ ಹಿಂದಿಗಿಂತ ಹೆಚ್ಚಾಗಿದೆ, ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡಬೇಕು, ಲೋಕಸಭಾ ಚುನಾವಣೆಯಲ್ಲಿ ತಾವು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದು ಬೇಡ ಎಂದು ನಿರ್ಧರಿಸಿದ್ದೇನೆ. ಕಾರಣ ನಾನೇ ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದಾದ್ಯಂತ ಓಡಾಡಲು ತೊಂದರೆಯಾಗುತ್ತದೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಯೋಚಿಸಬೇಕಾಗಿದೆ, ದೇಶಕ್ಕೆ ಸಮರ್ಥ ನಾಯಕತ್ವ ಒದಗಿಸಬೇಕಾಗಿದೆ. ಒಟ್ಟಾಗಿ ಓಡಾಟ ಮಾಡೋಣ, ನರೇಂದ್ರ ಮೋದಿ ಸಮರ್ಥ ನಾಯಕರು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ 19 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂಬ ದೃಢವಾದ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ಶೂನ್ಯ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸಬೇಕಾಗಿದೆ. ರಸ್ತೆಗಳೆಲ್ಲಾ ಗುಂಡಿ ಬಿದ್ದಿದೆ, ಗುಂಡಿ ಮುಚ್ಚಲೂ ಕೂಡ ಕಾಂಗ್ರೆಸ್ ಸರ್ಕಾರದಿಂದಾಗಿಲ್ಲ. ಒಟ್ಟಾರೆ ಅಭಿವೃದ್ಧಿ ಶೂನ್ಯವಾಗಿದೆ ಎಂದರು. ಮಾಜಿ ಶಾಸಕ ಡಿ.ಎಸ್. ಸುರೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಜಿ.ಪಂ. ಸದಸ್ಯರಾದ ಆನಂದಪ್ಪ, ಆನಂದಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಶೇಖರ್, ಮಲೆನಾಡು ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೇವಾನಂದ್, ಲಕ್ಕವಳ್ಳಿ ಸಂಜನ್ಕುಮಾರ್, ಸದಾನಂದ್, ಯಶೋಧರಮೂರ್ತಿ, ಗುರುಮೂರ್ತಿ, ಗಿರೀಶ್ ಪಕ್ಷದ ಕಾರ್ಯಕರ್ತರು ಇದ್ದರು.