ಅಡಕೆ ನಿಷೇಧ ಇಲ್ಲ: ಸಿಎಂ ಸಿದ್ದರಾಮಯ್ಯ
ಕ.ಪ್ರ.ವಾರ್ತೆ ಟಿ ಕಡೂರು ಟಿ ಜ.15
ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಲೀ ಯಾವುದೇ ಕಾರಣಕ್ಕೂ ಅಡಕೆಯನ್ನು ನಿಷೇಧ ಮಾಡುವುದಿಲ್ಲ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೂರು ತಾಲೂಕಿನ ಬಹುದಿನದ ಬೇಡಿಕೆ ಆಗಿರುವ ಹೆಬ್ಬೆ ಯೋಜನೆ ಜಾರಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ 841ನೇ ಗುರು ಸಿದ್ಧರಾಮೇಶ್ವರರ 2ನೇ ದಿನದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಂಕಷ್ಟದ ಬಗ್ಗೆ ತಮಗೆ ಅರಿವಿದೆ. ರಾಜ್ಯಾದ್ಯಂತ ಬರಗಾಲಕ್ಕೆ ತುತ್ತಾಗಿರುವುದರಿಂದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಕಡೂರು ತಾಲೂಕು ಕೂಡ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ಕ್ಷೇತ್ರದ ಶಾಸಕ ದತ್ತ ಕೂಡ ತಮ್ಮ ಮೇಲೆ ಒತ್ತಡ ಹೇರಿದ್ದರಿಂದ ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆ ಮೂಲಕ ಈ ಯೋಜನೆಗೆ ಸಂಭಂದಿಸಿದ ಎಲ್ಲ ಕಾರ್ಯಕ್ರಮಗಳು ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ. ಯಾವ ಅನುಮಾನ ಬೇಡ ಎಂದರು.
ಅಡಿಕೆ ನಿಷೇಧ ಕುರಿತಂತೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರವಾಗಲೀ ಕೇಂದ್ರ ಸರ್ಕಾರವವಾಗಲೀ ಅಡಿಕೆ ಬೆಳೆ ನಿಷೇಧಕ್ಕಾಗಿ ಯಾವುದೇ ವಿಧೇಯಕಕ್ಕೆ ಮುಂದಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ರೈತರ ಹಿತ ಕಾಪಾಡುವುದು ಸರ್ಕಾರದ ಕೆಲಸವಾಗಿದ್ದು ಗುಟ್ಕಾ ನಿಷೇಧಿಸಿದ ಮೇಲೆ ಅಡಿಕೆ ಬೆಲೆ ಹೆಚ್ಚಾಗಿದೆ.ಅಡಿಕೆ ನಿಷೇಧ ಎಂಬುದು ಬಿಜೆಪಿಯವರ ಆರೋಪ ಎಂದು ವೇದಿಕೆಯಲ್ಲಿದ್ದ ಶಾಸಕ ಸಿ.ಟಿ.ರವಿ ಅವರ ಕಡೆ ಕೈ ತೋರಿಸಿ ತಮಾಷೆ ಮಾಡಿ ಇದರಲ್ಲಿ ಯಾವುದೇ ಹುರುಳಿಲ್ಲ. ಯಾವ ಕಾರಣಕ್ಕೂ ಅಡಿಕೆ ನಿಷೇಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಕಡೂರು ತಾಲೂಕಿನ ರೈತರಿಗೆ ಅವಶ್ಯಕವಾಗಿರುವ ಹೆಬ್ಬೆ ಯೋಜನೆಗೆ ಅಡ್ಡಗಾಲಾಗಿರುವ ಅರಣ್ಯ ಪರಿಸರ ಸಮಸ್ಯೆಯನ್ನು ಸಿದ್ದರಾಮಣ್ಣನವರು ನಿವಾರಿಸಿಕೊಡಬೇಕು. ಕಡೂರು ಹೆಬ್ಬೆ ಯೋಜನೆ ಜಾರಿಗೊಳಿಸಿ ನೀರು ಬರುವಂತೆ ತಾವು ಕ್ರಮ ಕೈಗೊಂಡಲ್ಲಿ ನನ್ನ ಕ್ಷೇತ್ರದ ಜನಕ್ಕೆ ತಾವು ಆಧುನಿಕ ಯುಗದ ಸಿದ್ದರಾಮಣ್ಣರಾಗುತ್ತೀರಿ ಎಂದು ಹೇಳಲು ಬಯುಸುತ್ತೇವೆ. ಇದರಿಂದ ಅಡಕೆ, ತೆಂಗು ಬೆಳೆಗಾರರು ಸಂಕಷ್ಟದಿಂದ ಪಾರಾಗಲಿದ್ದಾರೆ. ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವುದರಿಂದ ತಾಲೂಕಿನ ಜನರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, ಶರಣರ ಸಂಕಲ್ಪದಂತೆ ಅವರ ಕಾಯಕವೇ ಜೀವನ ಎಂಬ ತತ್ವವನ್ನು ಅಳವಡಿಸಿಕೊಂಡಲ್ಲಿ ನಿಜವಾದ ಜೀವನ ನಡೆಸಲು ಸಾದ್ಯ ಎಂದರು.
ಸಾನಿಧ್ಯವನ್ನು ಕಡೂರು ಯಳನಡು ಮಠದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಮುಂಡರಗಿ ಸ್ವಾಮೀಜಿ, ಕೆರೆಗೋಡಿ ರಂಗಾಪುರ ಸ್ವಾಮೀಜಿ, ಪುಷ್ಪಗಿರಿ, ಪಾಂಡೋಮಟ್ಟಿ ಸ್ವಾಮೀಜಿಗಳು ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಗುರುಪ್ರಸಾದ್, ಕೆ.ಬಿ. ಬಸವರಾಜಪ್ಪ, ಎಚ್.ಎಂ. ಲೋಕೇಶ್, ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಗಡೆ, ಶಾಸಕರಾದ ವೈಎಸ್‌ವಿ ದತ್ತ, ಸಿ.ಟಿ.ರವಿ,ಬಿ.ಜಿ. ಗೋವಿಂದಪ್ಪ, ಜೆ.ಎಚ್. ಶ್ರೀನಿವಾಸ್, ವಿ.ಪ. ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿ.ಟಿ. ರವಿ, ಮುಖಂಡರಾದ ಬೆಳ್ಳಿ ಪ್ರಕಾಶ್, ಎಸ್.ವಿ. ಉಮಾಪತಿ, ಅಧ್ಯಕ್ಷ ಕೆ.ಎನ್. ಚಂದ್ರಶೇಖರಯ್ಯ, ಕಾರ್ಯಾಧ್ಯಕ್ಷ ಕಾಮನಕೆರೆ ಶಶಿಧರ್, ಭುಜೇಂದ್ರ, ಕೆ.ಎಂ. ಮಹೇಶ್ವರಪ್ಪ, ಬಿಸಲೆರೆ ಕೆಂಪರಾಜು, ಸಂಕ್ಲಾಪುರ ಕುಮಾರ್, ಬಿ.ಕೆ. ಚಂದ್ರಶೇಖರ್, ಜಿ.ಓಂಕಾರ್, ಕೆ.ರುದ್ರಪ್ಪ ಉಪಸ್ಥಿತರಿದ್ದರು