ಕವಯಿತ್ರಿ ಸುಕನ್ಯಾ ಸಮ್ಮೇಳನಾಧ್ಯಕ್ಷೆ
ಕ.ಪ್ರ.ವಾರ್ತೆ, ಮೂಡಿಗೆರೆ, ಜ.15
4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳ ಹೋಬಳಿ ಕೇಂದ್ರವಾದ ಕಳಸದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಅಶೋಕ್ ತಿಳಿಸಿದರು.
ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ತೆಗೆದು ಕೊಳ್ಳಲಾಗಿದೆ.
ಫೆ.13 ಹಾಗೂ 14ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಕವಯಿತ್ರಿ ಸುಕನ್ಯಾ ಮಹಾಬಲೇಶ್ವರ ರಾವ್ ಕಳಸ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಫೆ.13ರಂದು ಬೆಳಗ್ಗೆ ಧ್ವಜಾರೋಹಣ, ಮಧ್ಯಾಹ್ನ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ, ಸಮ್ಮೇಳನದ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ.14ರಂದು ವಿವಿಧ ಗೋಷ್ಠಿಗಳು, ಬಹಿರಂಗ ಅಧಿವೇಶನ, ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಡಾ. ಜಿ.ಭೀಮೇಶ್ವರ ಜೋಷಿ ಮಾತನಾಡಿ, ಶ್ರೀಕ್ಷೇತ್ರದ ಸನ್ನಿಧಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಕಳಸ ಹೋಬಳಿ ಗ್ರಾಮಸ್ಥರ ಸೌಭಾಗ್ಯವೇ ಸರಿ. ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಕೈ ಜೋಡಿಸುವಂತೆ ಮನವಿ ಮಾಡಿದರು.
ಕೆ.ಬಾಲಕೃಷ್ಣ ಭಟ್, ಬ್ರಹ್ಮದೇವ, ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ, ತಾಪಂ ಸದಸ್ಯೆ ಅನ್ನಪೂರ್ಣ, ಗ್ರಾಪಂ ಅಧ್ಯಕ್ಷೆ ಉಷಾ, ಕಸಪಾ ಹೋಬಳಿ ಅಧ್ಯಕ್ಷ ಅಬ್ದುಲ್ ಮುಂತಾದವರು ಉಪಸ್ಥಿತರಿದ್ದರು.