ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭದ್ರಾದಿಂದ ತರೀಕೆರೆ ತಾಲೂಕಿಗೂ ನೀರು

Rashmi Kasaragodu
Updated On : 16 Jan 2014, 11:11 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.15
ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ತಾಲೂಕಿಗೂ ನೀರು ಹರಿಸಲು ಪರಿಷ್ಕೃತ ಅಂದಾಜು ಹಾಗೂ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತರೀಕೆರೆಯ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ಕಾರ್ಯಾಕ್ರಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆಯ ನೀರನ್ನು ತಮ್ಮ ಜಮೀನುಗಳಿಗೂ ಹರಿಸಬೇಕೆಂದು ರೈತರು ನಡೆಸುತ್ತಿದ್ದ ಹೋರಾಟಕ್ಕೆ ಸ್ಪಂದಿಸಿ, ಇನ್ನು ಮುಂದೆ ನೀವು ಚಳವಳಿ ಮಾಡುವ ಅಗತ್ಯವಿಲ್ಲ ಎಂದರು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಹಾಗೂ ನೆರೆಯ ಚಿತ್ರದುರ್ಗ ಜಿಲ್ಲೆಯ 2.65 ಲಕ್ಷ ಎಕರೆ ಜಮೀನುಗಳಿಗೆ ನೀರು ಹರಿಸಲು 5985 ಕೋಟಿ ವೆಚ್ಚದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಭದ್ರಾ ಜಲಾಶಯದ ನೀರನ್ನು 156 ಕೆರೆಗಳಿಗೆ ತುಂಬಿಸಲಾಗುವುದು. ಇದರಿಂದ ಭೂಮಿಯ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ. ಬೋರ್‌ವೆಲ್‌ಗಳಲ್ಲಿ ಕುಡಿಯುವ ನೀರು ಸಿಗಲಿದೆ ಎಂದ ಮುಖ್ಯಮಂತ್ರಿ ಅವರು, ಈ ಯೋಜನೆಯ ಆರಂಭದಲ್ಲಿ ತರೀಕೆರೆ ತಾಲೂಕಿನ 53 ಕೆರೆಗಳನ್ನು ತುಂಬಿಸಿ 13 ಸಾವಿರ ಎಕರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ಸಿದ್ಧಪಡಿಸಿರುವ ಪರಿಷ್ಕೃತ ಅಂದಾಜು ಹಾಗೂ ಸಮಗ್ರ ಯೋಜನಾ ವರದಿಯಲ್ಲಿ ತರೀಕೆರೆ ತಾಲೂಕಿನ 82 ಕೆರೆಗಳಿಗೆ ನೀರು ತುಂಬಿಸಿ, 58 ಸಾವಿರ ಎಕರೆಗೆ ನೀರಾವರಿ ಅನುಕೂಲವಾಗಲಿದೆ. ಇದರಿಂದಾಗಿ ತರೀಕೆರೆ ತಾಲೂಕು ಬಹುಭಾಗ ನೀರಾವರಿ ಆಗಲಿದೆ. ಬರಪೀಡಿತ ಈ ತಾಲೂಕಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ತರೀಕೆರೆ ಪಟ್ಟಣಕ್ಕೆ ಕುಡಿಯುವ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 56 ಕೋಟಿ ರುಪಾಯಿಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.
ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ತರೀಕೆರೆ ಪಟ್ಟಣದಲ್ಲಿ ಸದ್ಯದಲ್ಲೇ ರಾಷ್ಟೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು. ತರೀಕೆರೆ ಪಟ್ಟಣದಲ್ಲಿರುವ ರೇಲ್ವೆ ನಿಲ್ದಾಣದ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಜ್ಜಂಪುರದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಗೆ ಅಲ್ಲಿನ ಜನರು ಮನವಿ ಮಾಡಿದ್ದಾರೆ. ಈ ಕುರಿತು ರೇಲ್ವೆ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
ಕಡೂರು- ಚಿಕ್ಕಮಗಳೂರು ರೈಲ್ವೆ ಮಾರ್ಗದಲ್ಲಿ ಮೇಲು ಸೇತುವೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 8 ಕೋಟಿ ಬಿಡುಗಡೆ ಮಾಡಿದೆ. ಅದೇ ರೀತಿ ರೇಲ್ವೆ ಹಳಿಯ ಸಮೀಪದಲ್ಲಿ ಜನರಿಗೆ ಓಡಾಡಲು ರಸ್ತೆಯನ್ನು ಸಹ ನಿರ್ಮಾಣ ಮಾಡಲು ಉದ್ದೇಸಿಸಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಕಡೂರು ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹಾಗೂ ತರೀಕೆರೆ ತಾಲೂಕಿನ ಅಜ್ಜಂಪುರ ಮತ್ತು ಶಿವನಿ ಹೋಬಳಿಗಳನ್ನು ಬರಪೀಡಿತ ಹೋಬಳಿಗಳೆಂದು ಘೋಷಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್, ವಾರ್ತಾ ಸಚಿವ ರೋಷನ್ ಬೇಗ್, ಸಹಕಾರ ಸಚಿವ ಮಹಾದೇವ ಪ್ರಸಾದ್, ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ, ಜಿಲ್ಲಾಧಿಕಾರಿ ಶೇಖರಪ್ಪ, ಜಿಪಂ ಸದಸ್ಯ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಉಪಸ್ಥಿತರಿದ್ದರು.
ತರೀಕೆರೆಯ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಸಚಿವರಾದ ಕೆ. ಅಭಯಚಂದ್ರ ಜೈನ್, ರೋಷನ್ ಬೇಗ್, ಮಹಾದೇವ ಪ್ರಸಾದ್ ಇದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement