ಯೋಜನೆ ಕಾರ್ಯರೂಪಕ್ಕೆ ಆದ್ಯತೆ ನೀಡಿ
ಪ್ರೌಢಶಾಲೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಜೀವರಾಜ್
ಕೊಪ್ಪ: ರಾಷ್ಟ್ರದಲ್ಲಿ ಶಿಕ್ಷಣ, ರಸ್ತೆ, ರೈತರ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿದಾಗ ಮಾತ್ರ ಭವಿಷ್ಯದಲ್ಲಿ ರುಪಾಯಿ ಮೌಲ್ಯ ಮತ್ತೆ ಏರಿಕೆ ಸಾಧ್ಯ ಎಂದು ಶಾಸಕ ಡಿ.ಎನ್. ಜೀವರಾಜ್ ಅಭಿಪ್ರಾಯಪಟ್ಟರು.
ತಾಲೂಕಿನ ಲೋಕನಾಥಪುರ ಗ್ರಾಮದಲ್ಲಿ ಬುಧವಾರ ನೂತನ ಪ್ರೌಢಶಾಲೆ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಸೇರಿದಂತೆ ಇಂದಿನ ಕಾಂಗ್ರೆಸ್ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.
ಶೃಂಗೇರಿ ಕ್ಷೇತ್ರದ ಬೇಗಾರು ಗ್ರಾಮದಲ್ಲಿ ಶಾಲೆಯ ಕಟ್ಟದ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಇರುವ ಸಂದರ್ಭ 5 ಕೋಟಿ ಅನುದಾನ ನೀಡಲಾಗಿತ್ತು. ಈಗ ಹಣ ಮಂಜೂರಾಗಿ ಕೆಲಸ ಪ್ರಾರಂಭ ಮಾಡಲು ಬಂದ ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭ ಮಾಡುವ ಮೊದಲು ಶಂಕುಸ್ಥಾಪನೆ ಕಾರ್ಯಕ್ರಮ ಮಾಡಿ ನಂತರದಲ್ಲಿ ಕಾಮಗಾರಿ ಪ್ರಾರಂಭ ಮಾಡಿ ಎಂದು ಧಮಕಿ ಹಾಕಿ ವಾಪಸ್ಸು ಕಳುಹಿಸುವಂತಹ ಹೀನಾ ಮನಸ್ಥಿತಿ ಕೆಲವರು ಪ್ರದರ್ಶಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ರಾಜಕಾರಣಿಗಳ ಇಚ್ಛಾಶಕ್ತಿ ಕೇವಲ ಕಲ್ಲು ನೆಟ್ಟು ಪ್ರಚಾರ ಗಿಟ್ಟಿಸಿಕೊಂಡು ಕೈ ಬಿಡುವಂತಹ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಅವುಗಳನ್ನು ಕಾರ್ಯರೂಪಕ್ಕೆ ತಂದು ಜನರಿಗೆ ತಲುಪಿಸುವಂತಹ ಕಡೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆಯ ಆರ್.ಇ.ಎಂ.ಎಸ್. ಯೋಜನೆಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅನುಸಾರಿಸುವ ಕ್ರಮಗಳನ್ನು ತಿದ್ದುಪಡಿ ಮಾಡುವಂತೆ ಶಿಕ್ಷಣ ಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ತಿದ್ದುಪಡಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಇದೇ ಸಂದರ್ಭ ಶಾಲೆಯಂದ ಸೋಮನಹಳ್ಳಿ ಶಾಲೆಗೆ ವರ್ಗಾವಣೆಗೊಂಡ ಮುಖ್ಯಶಿಕ್ಷಕ ಎಸ್.ಗಣೇಶ್ ಅವರನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಸದಸ್ಯ ಬೆಳಗೊಳ ರಮೇಶ್, ಬಿ.ಆರ್.ನಾರಾಯಣ್, ಜಿಪಂ ಸದಸ್ಯೆ ಅನ್ನಪೂರ್ಣ ಚನ್ನಕೇಶವ, ತುಳುವಿನ ಕೊಪ್ಪ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಕೃಷ್ಣಮೂರ್ತಿ, ಉಪಾಧ್ಯಕ್ಷೆ ರತ್ನಮ್ಮ ಚಿನ್ನಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಆಚಾರ್, ಮಾಜಿ ಜಿಪಂ ಅಧ್ಯಕ್ಷ ಎಚ್.ಎಂ. ಸತೀಶ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ರಾಮಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಅದ್ದಡ ಸತೀಶ್, ಬಿಇಓ ಜಿ.ಎನ್.ಪ್ರಕಾಶ್ ಮತ್ತಿತರಿದ್ದರು.