ಜಿಲ್ಲಾ ಕಾಂಗ್ರೆಸ್‌ಗೆ ಒಡಕು ಬಹಿರಂಗ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಜ.16
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಒಡೆದ ಮನಸ್ಸುಗಳು ಗುರುವಾರದಂದು ಮೌನ ಮುರಿದು, ತಮ್ಮ ಅಸಮಾಧಾನ ಹೊರ ಹಾಕುವ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಮಂಪರು ಪರೀಕ್ಷೆ: ದೇವಾಲಯ, ಮಸೀದಿ ಹಾಗೂ ಚರ್ಚ್ ಅಪವಿತ್ರಗೊಳಿಸುವುದು ನೀಚ ಕೃತ್ಯ. ಚಿಕ್ಕಮಗಳೂರಿನಲ್ಲಿ ದರ್ಗಾ ಅಪವಿತ್ರಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆದರೆ, ಇನ್ನೊಬ್ಬ ಆರೋಪಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಜಶೇಖರ್ ಅವರನ್ನು ಈವರೆಗೆ ಬಂಧಿಸಿಲ್ಲ. ಅವರನ್ನು ರಕ್ಷಿಸುವ ಕೆಲಸ ಶಾಸಕ ಸಿ.ಟಿ. ರವಿ ಮಾಡುತ್ತಿದ್ದಾರೆ. ರಾಜಶೇಖರ್ ನಿರಾಪರಾಧಿ ಆಗಿದ್ದರೆ, ಅವರನ್ನು ಪೊಲೀಸರ ಎದುರಿಗೆ ಹಾಜರುಪಡಿಸಿ ಸಿ.ಟಿ. ರವಿ ಅವರು ತನಿಖೆಗೆ ಸಹಕರಿಸಬೇಕು. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಗೊಂದಲದ ಹೇಳಿಕೆ: ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಸಚಿವರು ಒತ್ತುವರಿದಾರರನ್ನು ಖುಲ್ಲಾಗೊಳಿಸಲಾಗುವುದು ಎಂದು ಹೇಳುತ್ತಿದ್ದರೆ, ಇನ್ನೊಬ್ಬ ಸಚಿವರು ಒತ್ತುವರಿದಾರರಿಗೆ ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಗೊಂದಲದ ಹೇಳಿಕೆ ಜನರಲ್ಲಿ ಆತಂಕ ಮೂಡಿಸಿವೆ. ಇದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಪೆಟ್ಟು ಬೀಳಲಿದೆ ಎಂದರು.
ಪಕ್ಷ ವಿರೋಧಿ ಚಟುವಟಿಕೆ ಅಲ್ಲ: ಕಾಂಗ್ರೆಸ್ ಜನರ ಪಕ್ಷ. ಜನರ ನಡುವೆ ಇದ್ದು ಪಕ್ಷದ ಕೆಲಸ ಮಾಡಬೇಕೆಂದು ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸಚಿನ್ ಮೀಗಾ ಜನರ ನಡುವೆ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಎಂ.ಎಲ್. ಮೂರ್ತಿ ಹೇಳಿದರು.
ವಿಶ್ವಾಸಕ್ಕೆ ತೆಗೆದುಕೊಳ್ಳಲಿ: ಪಕ್ಷದ ಜಿಲ್ಲಾಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ. ಇಲ್ಲಿನ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಸೆಲ್ವಕುಮಾರ್ ಗಮನಕ್ಕೂ ತರಲಾಗಿದೆ. ಆದರೆ, ಈವರೆಗೆ ಬಿಕ್ಕಟ್ಟು ನಿವಾರಣೆ ಆಗಿಲ್ಲ. ಈ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಜಿಲ್ಲೆಯಿಂದ ನಿಯೋಗ ಕರೆದೊಯ್ಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ, ಬಜರಂಗದಳದ ಪರ ಒಲವು ಹೊಂದಿರುವ ಪೊಲೀಸ್ ಅಧಿಕಾರಿಗಳು ಮುಂದುವರಿಯುತ್ತಿದ್ದಾರೆ. ಸೋನಿಯಾಗಾಂಧಿ ಬಗ್ಗೆ ಹಗುರವಾಗಿ ಮಾತನಾಡಿದ್ದ ಪೊಲೀಸ್ ಅಧಿಕಾರಿಯನ್ನು ಈ ಜಿಲ್ಲೆಯಲ್ಲೇ ಮುಂದುವರಿಸಲಾಗಿದೆ. ಬದ್ಧತೆ ಇರುವ ಅಧಿಕಾರಿಗಳಿಲ್ಲ. ಇದಕ್ಕೆ ಪಕ್ಷದೊಳಗಿನ ಶತ್ರುಗಳೇ ಕಾರಣ. ಸಮಸ್ಯೆ ಕೂಡಲೇ ಬಗೆಹರಿಯಬೇಕು. ಇಲ್ಲದೆ ಹೋದರೆ ಚುನಾವಣೆ ವೇಳೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಮಹಮದ್ ಸೇರಿದಂತೆ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ಪಕ್ಷದ ಮುಖಂಡರು ಹಾಜರಿದ್ದರು.
ದಾಖಲಾತಿ ತಿದ್ದುಪಡಿಗೆ ಸಂಬಂಧಿಸಿದಂತೆ ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಪೊಲೀಸರು ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ದರ್ಗಾ ಅಪವಿತ್ರ ಹಾಗೂ ದಾಖಲಾತಿ ತಿದ್ದುಪಡಿ ಪ್ರಕರಣಗಳು ಅತ್ಯಂತ ಗಂಭೀರವಾದವುಗಳು. ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಲು ನಮ್ಮ ಪಕ್ಷದ ನಾಯಕರು ವಿಫಲರಾಗಿದ್ದಾರೆ. ಜನರ ಯೋಗಕ್ಷೇವು ವಿಚಾರಿಸಬೇಕೆ ಹೊರತು ಬಕೆಟ್ ಹಿಡಿಯುವುದಲ್ಲ. ಜಿಲ್ಲೆಯ ಈಗಿನ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಟಿ ಎಂ.ಎಲ್.ಮೂರ್ತಿ, ಮಾಜಿ ಜಿಲ್ಲಾಧ್ಯಕ್ಷ, ಕಾಂಗ್ರೆಸ್