ನಾಳೆಯಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಶೃಂಗೇರಿ: ಪಟ್ಟಣದಲ್ಲಿ ಜ.18 ಹಾಗೂ 19 ರಂದು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಜ. 18ರಂದು ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ ಕನ್ನಡ ಭವನದಿಂದ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಆಯೋಜಿಸಲಾಗಿದೆ. ಭುವನೇಶ್ವರಿ ಹಾಗೂ ಶಾರದಾಂಬೆಯ ಭಾವಚಿತ್ರದೊಂದಿಗೆ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟು ಗೌರೀಶಂಕರ ಸಭಾಂಗಣಕ್ಕೆ ತಲುಪಲಿದೆ. ವಿವಿಧ ಗೋಷ್ಠಿ, ಗಮಕ ರೂಪಕ, ಸಂಜೆ ಸಾಂಸ್ಕೃತಿಕ ಉತ್ಸವದಲ್ಲಿ ಗೀತ ಗಾಯನ ಸುಗಮ ಸಂಗೀತ ನಡೆಯಲಿದೆ. ಸಮ್ಮೇಳನದ 2ನೇ ದಿನ ಸಾಹಿತ್ಯ ಗೋಷ್ಠಿ, ಜಾನಪದ ಗೋಷ್ಠಿ, ಅಂಟಿಕೆ ಪಿಂಟಿಕೆ, ಪ್ರಾತ್ಯಕ್ಷತೆ, ಚಿಂತನಗೋಷ್ಠಿ, ಕವಿಗೋಷ್ಠಿ ನಡೆಯಲಿದೆ.