'ಸ್ವಾಭಿಮಾನದ ರಾಜಕೀಯಕ್ಕೆ ಮಧು ಮಸಿ'
ಕ.ಪ್ರ.ವಾರ್ತೆ ಸೊರಬ ಜ.16
ಹಾಲಿ ಸೊರಬ ಕ್ಷೇತ್ರದ ಶಾಸಕರು ಆಯ್ಕೆಯಾದ ನಂತರ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಮಧು ಬಂಗಾರಪ್ಪ ಅವರು ಹೆಸರಿಗೆ ಮಾತ್ರ ಶಾಸಕರಾಗಿದ್ದು, ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಎಸ್.ಪ್ರಶಾಂತ್ ಶಾಸಕರ ವಿರುದ್ಧ ಕಿಡಿಕಾರಿದರು.
ಗುರುವಾರ ತಾಲೂಕಿನ ಆನವಟ್ಟಿ ಸಮೀಪದ ಕೋಟಿಪುರದ ಕೈಟಬೇಶ್ವರ ದೇವಸ್ಥಾನದಿಂದ 2 ಕಿ.ಮೀ ದೂರದ ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಜನರು ಸಂಪೂರ್ಣ ಹಾಳಾಗಿರುವ ರಸ್ತೆಗಳ ಗುಂಡಿಗೆ ಮಣ್ಣು ತುಂಬಿಸುವ ಮೂಲಕ ಹಮ್ಮಿಕೊಂಡಿದ್ದ ಅಣಕು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಸಿ ಬಳಿದಿದ್ದಾರೆ: ಜನತೆಯಿಂದ ಭಿಕ್ಷೆ ಎತ್ತಿ ರಸ್ತೆ ದುರಸ್ತಿ ಮಾಡಿಸುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ತಾಲೂಕಿನ ಸ್ವಾಭಿಮಾನ ರಾಜಕೀಯಕ್ಕೆ ಮಧು ಬಂಗಾರಪ್ಪ ಮಸಿ ಬಳಿದಿದ್ದಾರೆ. ವಿರೋಧ ಪಕ್ಷದವರು ಅನುದಾನ ನೀಡುತ್ತಿಲ್ಲ. ತಮ್ಮನ್ನು ಅವಹೇಳನ ಮಾಡುತ್ತಾರೆ ಎಂಬಿತ್ಯಾದಿ ಅನಗತ್ಯ ದೂರು ನೀಡುವುದನ್ನು ಹೊರಗಿಟ್ಟು ತನ್ನ ಶಕ್ತಿಯನ್ನು ಬಳಸಿ, ಭಿಕ್ಷೆ ಎತ್ತೋದು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಅನುದಾನ ತರಲಿ ಎಂದು ಸವಾಲೆಸೆದರು.
ಜನತೆ ಇವರನ್ನು ಆಯ್ಕೆ ಮಾಡಿ ಕಳುಹಿಸಿರುವುದು ತಾಲೂಕು ಅಭಿವೃದ್ಧಿಯತ್ತ ಕೊಂಡ್ಯೊಯ್ಯಲಿ ಎಂದು, ಮತಗಳಿಕೆಗಾಗಿಯೂ ಅಲ್ಲ. ಯೋಜನೆಯ ಹೆಸರಿನಲ್ಲಿ ಕಮಿಷನ್ ಹೊಡೆಯಲೂ ಅಲ್ಲ ಎಂಬುದನ್ನು ಅರಿತುಕೊಳ್ಳಲಿ. ಜನಪ್ರತಿನಿಧಿಯಾಗಿ ಕ್ಷೇತ್ರಕ್ಕೆ ಅಗತ್ಯವಿರುವ ಕೆಲಸ ಮಾಡಲಿ. ಇವರ ಕೈಯಲ್ಲಿ ಅಗುವುದಿಲ್ಲ ಎಂದರೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು.
ಅಭಿವೃದ್ಧಿ ಕನಸು: ಆನವಟ್ಟಿಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ್ ಗುತ್ತೇರ್ ಮಾತನಾಡಿ, ಶಾಸಕರ ಮಾತಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ರಾಜ್ಯಾದಂತ ಎಲ್ಲಾ ತಾಲೂಕುಗಳಲ್ಲಿ ಅಭಿವೃದ್ಧಿ ಹಾಗೂ ರಸ್ತೆ ದುರಸ್ತಿ ಕೆಲಸಗಳು ನಡೆಯುತ್ತಿದ್ದರೂ ನಮ್ಮ ತಾಲೂಕಿನಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳು ಕನಸಿನ ಮಾತಾಗಿವೆ ಎಂದರು.
ತಾಲೂಕಿನ ಪ್ರತಿ ಇಲಾಖೆಯಲ್ಲಿನ ಎಲ್ಲಾ ಅಧಿಕಾರಿಗಳು ಉದ್ಧಟತನದಿಂದ ವರ್ತಿಸುತ್ತಿದ್ದು, ಪ್ರಸ್ತುತ ತೊಗಲಕ್ ಆಡಳಿತವಾಗಿದೆ. ಇಷ್ಟೆಲ್ಲ ರಸ್ತೆಗಳ ಮೇಲೆ ಗುಂಡಿ, ಗೊಟರುಗಳು ಬಿದ್ದರು ಸಹಾ ಯಾವುದೇ ಎಂಜಿನಿಯರ್ ಇತ್ತ ಗಮನಹರಿಸಿಲ್ಲ. ಅವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಉಂಟಾಗಿದೆ.
ಸರ್ಕಾರ ಕೂಡ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಸೋಮಾರಿಯನ್ನಾಗಿಸುತ್ತಿದೆ. ಇದರ ಬದಲು ಪ್ರತಿ ಹಳ್ಳಿಗಳಲ್ಲಿ ಉಚಿತ ಧರ್ಮಛತ್ರಗಳನ್ನು ತೆರೆದು ಯೋಜನೆಯ ತೆವಲನ್ನು ತೀರಿಸಿಕೊಳ್ಳುವುದು ಸೂಕ್ತ ಎಂದು ಲೇವಡಿ ಮಾಡಿದರು.
ರುದ್ರಗೌಡ ಮಲ್ಲಾಪುರ, ಚೆನ್ನಬಸಪ್ಪ ಮಲ್ಲಾಪುರ, ನಿಂಗಪ್ಪ, ದಯಾನಂದ, ಎಂ.ಕೆ.ರಾಜು, ಸೋಮಪ್ಪ, ಶಿವಲಿಂಗಪ್ಪ, ವೀರಭದ್ರಪ್ಪ, ಉಮೇಶ್, ನಂದೇಶ್, ಚಂದ್ರು, ಚಂದ್ರೇಗೌಡ, ಭುವನೇಶ್ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಹಾಳು ರಸ್ತೆ ಮುಚ್ಚಲು ಸೇರಿದ್ದರು.