ಅಸಮರ್ಪಕ ವಿದ್ಯುತ್ ಪೂರೈಕೆ: ಕಚೇರಿಗೆ ಮುತ್ತಿಗೆ
ಕೊಪ್ಪ: ತಾಲೂಕಿನ ಬಸರೀಕಟ್ಟೆಯ ಹೊನ್ನಗುಂಡಿ ಭಾಗದ ವಿದ್ಯುತ್ ಗ್ರಾಹಕರು ಶುಕ್ರವಾರ ಜಯಪುರ ಮೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟಿಸಿದರು.
ವಿದ್ಯುತ್ ಪರಿವರ್ತಕದ ದೋಷದಿಂದ, ಹಲವಾರು ವರ್ಷಗಳಿಂದ ಸರಬರಾಜಾಗುವ ವಿದ್ಯುತ್ ತೀರಾ ಕಡಿಮೆ ವೋಲ್ಟೇಜ್ನಿಂದ ಪೂರೈಕೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತಿದ್ದು, ನಿತ್ಯ ಗೃಹಬಳಕೆಗೂ ನಿಷ್ಪ್ರಯೋಜಕವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಹಕರು ದೂರಿದರು.
ಅಲ್ಲದೇ ವಾಲಿಕೊಂಡ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಿ ಬಸರಿಕಟ್ಟೆಯಲ್ಲಿ ಖಾಯಂ ವಾಸಮಾಡುವ ಲೈನ್ಮ್ಯಾನ್ ನೇಮಕ ಮಾಡುವಂತೆ ಒತ್ತಾಯಿಸಲಾಗಿದೆ ಎಂದರು.
ಮನವಿಯನ್ನು ಜಯಪುರದ ಸಹಾಯಕ ಕಾರ್ಯಪಾಲಕ ಅಭಿಯಂತರರ ನಸೀರ್ ಮೂಲಕ ಇನ್ನೆರಡು ವಾರದಲ್ಲಿ ಸಮಸ್ಯೆ ಪರಿಹರಿಸದಿದ್ದಲ್ಲಿ ಮೆಸ್ಕಾಂ ಮಂಗಳೂರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಅತ್ತಿಕುಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾಜಾ, ವನಿತಾ, ನಾಗರೀಕ ಹಿತರಕ್ಷಣಾ ವೇದಿಕೆಯ ಸುಕುಮಾರ್, ಕಡೇಮನೆ ರಾಘವೇಂದ್ರ ನೇತೃತ್ವ ವಹಿಸಿದ್ದರು.