ಕುಡಿಯಕ್ಕೇ ನೀರಿಲ್ಲ, ಚೆಲ್ಲಕ್ಕಿದೆಯೇ?
ವಿಶೇಷ ವರದಿ
ಕ.ಪ್ರ.ವಾರ್ತೆ ಟಿ ಬೀರೂರು ಟಿ ಜ.17
ಇಲ್ಲಿನ ಪುರಸಭೆ ಆವರಣದೊಳಗಿರುವ ಓವರ್ ಹೆಡ್ ಟ್ಯಾಂಕ್ ನೀರು ತುಂಬಿ ಗಂಟೆಗಟ್ಟಲೆ ಪೋಲಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಪುರಸಭೆ ಆಡಳಿತದ ಕಾರ್ಯವೈಖರಿಗೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹನಿ ಹನಿ ನೀರಿಗೂ ಪರಿತಪಿಸಿ ಖಾಲಿ ಕೊಡ ಹೊತ್ತು ಊರಿನೆಲ್ಲೆಡೆ ಮಹಿಳೆಯರು ನೀರಿಗಾಗಿ ಪರಿತಪಿಸುತ್ತಿದ್ದರೆ ಕಣ್ಣಿಗೆ ಕಂಡರೂ ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳಿಂದ ಉಡಾಫೆ ಉತ್ತರ ದೊರಕುತ್ತಿದೆ. ಇಂಥವರಿಂದ ಯಾವ ರೀತಿಯ ಸ್ಪಂದನೆ ಸಾಧ್ಯ ಎಂದು ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಎಚ್ಚರಿಕೆ: ನೀರು ನಿರ್ವಹಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ಅಸಮರ್ಪಕ ಬೋರ್ವೆಲ್ಗಳ ನಿರ್ವಹಣೆಯಾಗಿ ಇರುವ ನೀರು ಸಮರ್ಪಕವಾಗಿ ವಿತರಣೆಯಾಗದೆ ಎಲ್ಲ ವಾರ್ಡುಗಳಲ್ಲೂ ಕಳೆದ ಆರೇಳು ತಿಂಗಳಿಂದ ನಲ್ಲಿ ಸಂಪರ್ಕಗಳು ಜೀವ ಕಳೆದುಕೊಂಡಿವೆ. ಪುರಸಭಾ ಸದಸ್ಯರಿಗೆ 9 ತಿಂಗಳಿಂದ ಅಧಿಕಾರ ಕೂಡ ನೀಡದಿರುವುದು ಹಾಗೂ ಅಧಿಕಾರಿಗಳು ಸ್ಪಂದಿಸದೆ ವ್ಯವಸ್ಥೆಯಿಂದ ಜನ ರೋಸಿಹೋಗಿದ್ದಾರೆ. ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲಾಡಳಿತ ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸದಿದ್ದರೆ ಪುರಸಭೆ ಕಚೇರಿಗೆ ಬೀಗ ಹಾಕಿ ಬೀದಿಗಿಳಿದು ಹೋರಾಡುವುದಾಗಿ ನಾಗರಿಕರು ಎಚ್ಚರಿಸುತ್ತಿದ್ದಾರೆ.
ಈಗಾಗಲೇ ಆಶ್ರಯ ನಿವೇಶನ ವಿತರಣೆಯಲ್ಲಿ ವಿಳಂಬ, ಕಸ ವಿಲೇವಾರಿ ಸಮಸ್ಯೆ, ಒಳಚರಂಡಿ ಸಮಸ್ಯೆ ನಿರ್ಲಕ್ಷದಿಂದಾಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜ್ವರ, ಹಲವು ಸಾಂಕ್ರಾಮಿಕ ರೋಗಗಳ ಕಾರಣಗಳಿಗಾಗಿ ಒಳರೋಗಿಗಳು ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಿದೆ. ಪುರಸಭೆ ಹಾಗೂ ಆರೋಗ್ಯ ಅಧಿಕಾರಿಗಳು ಊರಿನ ನೈರ್ಮಲ್ಯ ಕಾಪಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಳ ಚರಂಡಿಗಳಿಗೆ ಔಷಧಿ ಸಿಂಪಡಿಸುವುದು ಹಾಗೂ ಕಳೆ ತೆಗೆಸುವಂತೆ ಕ್ರಮ ಕೈಗೊಂಡು ಗಮನಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತರ ಸಂಘ, ಕನ್ನಡ ಸೇನೆ ನಾಗರಿಕರ ಪಟ್ಟಣದ ನಾಗರಿಕರಿಂದ ಬೇಡಿಕೆಯಾಗಿದೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಸ್ಪಂದಿಸುವರೇ ಕಾದು ನೋಡಬೇಕಿದೆ.
ಕಾಳಜಿ ವಹಿಸಿ: ಪೋಲಾಗುತ್ತಿರುವ ನೀರನ್ನು ಜಿ.ಪಂ. ಸದಸ್ಯ ಬಿ.ಪಿ. ನಾಗರಾಜ್ ನೋಡಿ, ನೀರು ಪೋಲಾಗುತ್ತಿರುವ ಕುರಿತು ಪುರಸಭೆಯ ನೀರು ನಿರ್ವಾಹಕಿ ನಯನಾರವರನ್ನು ವಿಚಾರಿಸಿದರೆ ಬರೀ ಹಾರಿಕೆ ಉತ್ತರ ನೀಡಿ ನೀರು ಪೋಲಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳಿಗೆ ಬೆಲೆ ಕೊಡದಂತಹ ಸ್ಥಿತಿ ತಲುಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀರು ಪೋಲಾಗುತ್ತಿರುವುದನ್ನು ತಪ್ಪಿಸಿ ಸಾರ್ವಜನಿಕ ಆಸ್ಪತ್ರೆಯ ಸಂಪಿಗೆ ನೀರು ಹಾಯಿಸಿದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಕಾಳಜಿ ವಹಿಸಿ ಪುರಸಭೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಈ ಕುರಿತು 'ಕನ್ನಡಪ್ರಭ' ದೊಂದಿಗೆ ಮಾತನಾಡಿದ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮೋಹನಕುಮಾರ್, ಈ ಹಿಂದೆ ಪುರಸಭೆಯ ಸಿಬ್ಬಂದಿ ಆಡಳಿತ ಕಾರ್ಯವೈಖರಿ ಬಗ್ಗೆ ಪ್ರತಿಭಟನೆ ನಡೆಸಿ ಎಚ್ಚರಿಸಿದ್ದೇವೆ. ಸಾಕಷ್ಟು ಬೇಡಿಕೆಗಳನ್ನು ಪೂರೈಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಮನವಿ ಪತ್ರ ನೀಡಿ ಕ್ರಮ ಕೈಗೊಳ್ಳುವಂತೆ ಕಾಲಾವಕಾಶ ನೀಡಿದರೂ ಕೂಡ ಇದುವರೆಗೂ ಯಾವ ಪ್ರಯೋಜನ ಆಗಿಲ್ಲ. ಮುಂದೆ ಸರಿಪಡಿಸದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.