ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇಶದಲ್ಲಿ ಬದಲಾವಣೆ ಯುವಕರಿಂದ ಸಾಧ್ಯ

Rashmi Kasaragodu
Updated On : 18 Jan 2014, 12:36 pm

ಚಿಕ್ಕಮಗಳೂರು: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆಯ ಈ ಸಂದರ್ಭದಲ್ಲಿ ನಾವು ಆ ರಾಷ್ಟ್ರಭಕ್ತನ ತತ್ವ, ಚಿಂತನೆ ಸಿದ್ದಾಂತ, ಆದರ್ಶ, ಸಂದೇಶ ಮತ್ತು ಅವರು ಪ್ರತಿಪಾದಿಸಿದ ರಾಷ್ಟ್ರಧರ್ಮವನ್ನು ನಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂದು ಚಿಂತನೆ ನಡೆಸುವ ಅಗತ್ಯವಿದೆ ಎಂದು ಸಂಸ್ಕಾರ ಭಾರತೀ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ ಹೇಳಿದ್ದಾರೆ.
ನೆಹರು ಯುವ ಕೇಂದ್ರ ಮತ್ತು ಮಾರ್ದನಿ ಸಂಘಟನೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಅಂಗವಾಗಿ ನಗರದ ಎಂ.ಇ.ಎಸ್. ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.
ಭಾರತ ಅಸಾಮಾನ್ಯ ರಾಷ್ಟ್ರ: ವಿವೇಕಾನಂದರು, ಸಮಾಜ, ದೇಶಕೋಸ್ಕರ ಬದುಕಿದವರು. ಭಾರತ ಹಾವಾಡಿಗರ ದೇಶವಲ್ಲ. ಅದು ಜಗತ್ತಿನಲ್ಲೇ ಅಸಾಮಾನ್ಯ ರಾಷ್ಟ್ರ ಎಂದು ವಿಶ್ವಕ್ಕೆ ಸಾರಿದವರು. ದೇಶದ ಯುವಕರ ಜಾಡ್ಯವನ್ನು ಕಳೆದು ಅವರಲ್ಲಿ ಜಾಗೃತಿ ಮೂಡಿಸಿದವರು ಎಂದ ಅವರು, ದೇಶದಲ್ಲಿ ಏನಾದರೂ ಬದಲಾವಣೆಯಾಗಬೇಕಿದ್ದರೆ ಯುವಜನತೆ ಆ ಮಹಾತ್ಮ ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ವಿವೇಕಾನಂದರ ಆದರ್ಶ ಪಾಲಿಸಿ: ಭಾರತದ ಭವಿಷ್ಯ ಅಡಗಿರುವುದು ವಿಧಾನಸೌಧ ಅಥವಾ ಸಂಸತ್ ಭವನದಲ್ಲಲ್ಲ. ಅದು ಇರುವುದು ಯುವಜನತೆಯಲ್ಲಿ, ವಿವೇಕಾನಂದರ ಆದರ್ಶ ಮತ್ತು ಚಿಂತನೆಯ ಮೂಲಕ ದೇಶವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಇಂದು ಅವರ ಮೇಲಿದೆ ಎಂದ ಅವರು, ನಮ್ಮ ಬದುಕಿಗೆ ಆದರ್ಶ ಮತ್ತು ಪ್ರೇರಣೆಯಾಗಬೇಕಿರುವುದು ಸಿನಿಮಾ ನಟರಲ್ಲ. ನಮ್ಮ ಯುವ ಜನತೆ ಇರಬೇಕಾಗಿರುವುದು ವೈನ್ ಸೆಂಟರ್‌ಗಳಲ್ಲಲ್ಲ ಡಿವೈನ್ ಸೆಂಟರ್‌ಗಳಲ್ಲಿ ಅವರು ಸಾಗಬೇಕಿರುವುದು ಸಿನಿಮಾ ನಟರ ಹಿಂದಲ್ಲ. ವಿವೇಕಾನಂದರ ಆದರ್ಶಗಳ ಹಿಂದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಇ.ಎಸ್. ಸಂಸ್ಥೆಯ ಖಜಾಂಚಿ ಡಿ.ಹೆಚ್. ನಟರಾಜ್ ದೇಶದಲ್ಲಿ ಏನಾದರೂ ಬದಲಾವಣೆಯಾಗಬೇಕಿದ್ದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯವಿದ್ದು ಆ ದಿಕ್ಕಿನಲ್ಲಿ ಅವರು ಚಿಂತನೆ ನಡೆಸಬೇಕು ಎಂದು ಸಲಹೆ ಮಾಡಿದರು.
ಸುಪಾರಿ ಹಂತಕರ ಗುಂಡಿಗೆ ಇತ್ತೀಚೆಗೆ ಬಲಿಯಾದ ಪಿ.ಎಸ್.ಐ. ಮಲ್ಲಿಕಾರ್ಜುನ ಬಂಡೆ ಅವರ ಆತ್ಮಕ್ಕೆ ಶಾಂತಿ ಕೋರಿ ಸಮಾರಂಭದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಪ್ರೇಂಕುಮಾರ್, ಎಂ.ಇ.ಎಸ್. ಸಂಸ್ಥೆಯ ಸಹ ಕಾರ್ಯದರ್ಶಿ ಶಂಕರನಾರಾಯಣಭಟ್, ಪ್ರಾಂಶುಪಾಲ ಡಾ. ವಿಷ್ಣುವರ್ಧನ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮಂಜುನಾಥರಾವ್, ಮಾರ್ದನಿ ಸಂಚಾಲಕ ಶಾಶ್ವತ್ ಭಟ್, ನಿರ್ದೇಶಕ ಸೀತಾರಾಮ್ ಭರಣ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement