ಅಹೋರಾತ್ರಿ ಧರಣಿ: ಎಚ್ಚರಿಕೆ
ಚಿಕ್ಕಮಗಳೂರು: ಆಲ್ದೂರಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟೆ ತೆರವುಗೊಳಿಸುವಂತೆ ಆಗ್ರಹಿಸಿ ಜ. 24 ರಿಂದ ಅಹೋರಾತ್ರಿ ಧರಣಿಯನ್ನು ಗ್ರಾಪಂ ಕಚೇರಿ ಎದುರು ನಡೆಸಲು ನಿರ್ಧರಿಸಲಾಗಿದೆ. ಆಲ್ದೂರಿನ ಡಾ. ಬಿ.ಆರ್. ಅಂಬೇಡ್ಕರ್ ಹೋರಾಟ ವೇದಿಕೆ ನೇತೃತ್ವದಲ್ಲಿ ಸಂಚಾಲಕ ಯಲಗುಡಿಗೆ ಹೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅನಧಿಕೃತ ಕಟ್ಟೆ ತೆರವುಗೊಳಿಸಲು ಜಿಲ್ಲಾಡಳಿತ ಮತ್ತು ಗ್ರಾಪಂ ತಿಂಗಳು ಕಳೆದರೂ ಕ್ರಮ ಕೈಗೊಳ್ಳದೆ ಒಬ್ಬರ ಮೇಲೆ ಇನ್ನೊಬ್ಬರು ಹೊಣೆಗಾರಿಕೆ ಜಾರಿಸುತ್ತಾ ಕಾಲಹರಣ ಮಾಡುತ್ತಿರುವುದನ್ನು ಖಂಡಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹೊನ್ನಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ಪ್ರಬಲ ಹೋರಾಟ ರೂಪಿಸದಿದ್ದರೆ ದಲಿತರು ಮತ್ತು ಬಡವರಿಗೆ ಉಳಿಗಾಲವಿಲ್ಲ ಎಂದರು. ಇಳೇಖಾನ್ ದೇವರಾಜ್, ಕೃಷ್ಣಕುಮಾರ್, ಚಂದ್ರಶೇಖರಪ್ಪ, ಕಠಾರದಹಳ್ಳಿ ಸಿದ್ದಯ್ಯ, ಸೂಜಿಕಟ್ಟೆ ಜಗದೀಶ್, ಪರಮೇಶ್, ಎಡೆದಾಳು ಕುಮಾರ್ ಮಾತನಾಡಿದರು.